Advertisement

ವಿಧಾನಸಭಾ ಕದನ-ಮೊದಲ ಸುತ್ತು: ಬಾದಾಮಿಯಿಂದ ಸಿದ್ದರಾಮಯ್ಯ ಹುಣಸೂರಿಗೆ ಹೋಗುತ್ತಾರಾ?

03:56 PM Apr 22, 2022 | Team Udayavani |
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ದಾಳ ಉರುಳಿಸಲು ಆರಂಭಿಸಿದೆ. ಈ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರಿಗೆ ಸಡ್ಡು ಹೊಡೆಯಲು ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಮೈಸೂರು ಜಿಲ್ಲೆಯ ಮಟ್ಟಿಗಂತೂ ಜೆಡಿಎಸ್‌ಗೆ ಈಗ ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಅವರೇ ಹೈಕಮಾಂಡ್‌ ಆಗಿದ್ದಾರೆ.ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 203ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಕ್ಷೇತ್ರಗಳಲ್ಲಿ ಹುಣಸೂರಿನ ಹೆಸರೂ ಕೇಳಿ ಬಂದಿದೆ. ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಬೇಕೆಂಬುದು ಈ ಕ್ಷೇತ್ರದ ಕಾಂಗ್ರೆಸ್‌ನ ಕೆಲವು ಮುಖಂಡರ ಆಗ್ರಹವಾಗಿದೆ.  ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಗುದ್ದಾಟ ಈಗಲೇ ಆರಂಭವಾಗಿದೆ...
Now pay only for what you want!
This is Premium Content
Click to unlock
Pay with

ಆಡಳಿತಾರೂಢ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ವರ್ಚಸ್ವಿ ನಾಯಕರ ಕೊರತೆ, ಈಗಷ್ಟೇ ಮೈ ಚಳಿ ಬಿಟ್ಟು ಏಳುತ್ತಿರುವ ಕಾಂಗ್ರೆಸ್‌, ಗೊಂದಲದ ಗೂಡಾಗಿರುವ ಜೆಡಿಎಸ್‌…ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು ಜಿಲ್ಲೆ ಸದ್ಯದ ಮಟ್ಟಿಗೆ ಒಂದು ರೀತಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಸಮಬಲದ ಹೋರಾಟದ ಕಣದಂತಿದೆ.

Advertisement

ಮೈಸೂರು ಜಿಲ್ಲೆಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂ ಡೇಶ್ವರಿ, ಎಚ್‌.ಡಿ.ಕೋಟೆ (ಎಸ್‌ಟಿ ಮೀಸಲು) ಪಿರಿಯಾಪಟ್ಟಣ, ಹುಣಸೂರು, ಕೆ.ಆರ್‌.ನಗರ, ನಂಜನಗೂಡು (ಮೀಸಲು) ತಿ.ನರಸೀಪುರ (ಮೀಸಲು) ವರುಣಾ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 3, ಕಾಂಗ್ರೆಸ್‌ 3 ಹಾಗೂ ಜೆಡಿಎಸ್‌ 5 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಹುಣಸೂರು ಕ್ಷೇತ್ರದಲ್ಲಿ ಗೆದ್ದಿದ್ದ ಜೆಡಿಎಸ್‌ ಉಪ ಚುನಾವಣೆಯಲ್ಲಿ ಪರಾಭವಗೊಂಡು ಕಾಂಗ್ರೆಸ್‌ ಪತಾಕೆ ಹಾರಿತು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಇಬ್ಬರು ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಅಡಗೂರು ಎಚ್‌.ವಿಶ್ವನಾಥ್‌ ಈಗ ಆ ಪಕ್ಷದಿಂದ ದೂರ ಸರಿದಿದ್ದಾರೆ. ವಿಶ್ವನಾಥ್‌ ಬಿಜೆಪಿಗೆ ಪಕ್ಷಾಂತರವಾಗಿ ಉಪ ಚುನಾವಣೆಯಲ್ಲಿ ಪರಾಭವಗೊಂಡರು. ಅನಂತರ ವಿಧಾನಪರಿಷತ್‌ ಸದಸ್ಯರಾದರು. ಈಗ  ಬಿಜೆಪಿಯಿಂದಲೂ ದೂರ ನಿಂತಿದ್ದಾರೆ. ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಲ್ಲಿ ಮುನಿಸಿಕೊಂಡು ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ವರ್ಚಸ್ವಿ ನಾಯಕರಾಗಿರುವ  ಜಿ.ಟಿ.ದೇವೇಗೌಡ ಅವರು ತಳೆಯುವ ರಾಜಕೀಯ ನಿಲುವು  ಜಿಲ್ಲೆಯ ರಾಜಕಾರಣದ ಸಮೀಕರಣವನ್ನು ಬದಲಿಸುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಣಿಸಿದ ಜಿ.ಟಿ.ದೇವೇಗೌಡರು ಈಗ ಸಿದ್ದರಾಮಯ್ಯ ಅವರಿಗೆ ನಿಕಟವಾಗಿದ್ದಾರೆ. ಆದರೂ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮಗೆ ಹಾಗೂ ತಮ್ಮ ಪುತ್ರ, ಎಂಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರಿಗೆ ಟಿಕೆಟ್‌ ನೀಡಬೇಕೆಂಬುದು ಕಾಂಗ್ರೆಸಿಗೆ ಜಿ.ಟಿ. ದೇವೇಗೌಡರ ಬೇಡಿಕೆಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ದಾಳ ಉರುಳಿಸಲು ಆರಂಭಿಸಿದೆ. ಈ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರಿಗೆ ಸಡ್ಡು ಹೊಡೆಯಲು ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಮೈಸೂರು ಜಿಲ್ಲೆಯ ಮಟ್ಟಿಗಂತೂ ಜೆಡಿಎಸ್‌ಗೆ ಈಗ ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಅವರೇ ಹೈಕಮಾಂಡ್‌ ಆಗಿದ್ದಾರೆ.

Advertisement

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 203ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಕ್ಷೇತ್ರಗಳಲ್ಲಿ ಹುಣಸೂರಿನ ಹೆಸರೂ ಕೇಳಿ ಬಂದಿದೆ. ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಬೇಕೆಂಬುದು ಈ ಕ್ಷೇತ್ರದ ಕಾಂಗ್ರೆಸ್‌ನ ಕೆಲವು ಮುಖಂಡರ ಆಗ್ರಹವಾಗಿದೆ.  ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಗುದ್ದಾಟ ಈಗಲೇ ಆರಂಭವಾಗಿದೆ.

ಕಾಂಗ್ರೆಸ್‌ನಲ್ಲಿ ಚಾಮರಾಜ, ನಂಜನಗೂಡು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇದೆ. ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಕ್ಷೇತ್ರ ಬದಲಿಸಿ ನಂಜನಗೂಡು (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್‌.ಧ್ರುವ ನಾರಾಯಣ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಪ್ರವೇಶ ಪಡೆದು ನಂಜನಗೂಡಿನಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಡಾ| ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಈ ಬಾರಿ ತಿ.ನರಸೀಪುರ (ಮೀಸಲು)ದಿಂದ  ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಿಚಾರದಲ್ಲಿ ಈ ಬಾರಿ ನಂಜನಗೂಡು ಕ್ಷೇತ್ರ ಹೆಚ್ಚು ಕುತೂಹಲ ಕೆರಳಿಸಿದೆ.

ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ

ಬಿಜೆಪಿಯಲ್ಲಿ 3-4 ಅಸೆಂಬ್ಲಿ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಆ ಪಕ್ಷಕ್ಕೆ ನೆಲೆ ಇಲ್ಲ. ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ನರಸಿಂಹ ರಾಜ ಕ್ಷೇತ್ರಗಳು ಒಂದು ಕಾಲದಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳು. ಆದರೆ ಈ ಕ್ಷೇತ್ರಗಳಲ್ಲಿ ಈಗ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ. ಗ್ರಾಮೀಣ ಭಾಗದಲ್ಲಿ ಪಕ್ಷವು ದುರ್ಬಲ ಸ್ಥಿತಿಯಲ್ಲಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಈಗ ಒತ್ತು ನೀಡಿರುವ ಬಿಜೆಪಿಯು ಟಾರ್ಗೆಟ್‌-150 ಗುರಿ ಸಾಧಿಸಲು ಮೈಸೂರು ಪ್ರಾಂತ್ಯದಲ್ಲಿ ಪಕ್ಷದ ನೆಲೆ ವಿಸ್ತರಿಸಲು ಕಾರ್ಯತಂತ್ರ ರೂಪಿಸಿದೆ.

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.