ಅರಸೀಕೆರೆ: ಜಗಜ್ಯೋತಿ ಬಸವೇಶ್ವರರ ಸಮಕಾಲೀನರಾಗಿದ್ದ ಸಿದ್ದರಾಮೇಶ್ವರರು ವಚನಗಳ ಮೂಲಕ ಸಮಾಜ ಸುಧಾರಣೆ ಮಾಡುವುದರೊಂದಿಗೆ ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಜೀವಜಲದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದರು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮೇಶ್ವರರ ಮಾದರಿಯಲ್ಲಿ ಕೆರೆ, ಕಟ್ಟೆಗಳನ್ನು ನಿರ್ಮಿಸಿ ಸಂರಕ್ಷಿ ಸಿದರೆ ನೀರಿನ ಕೊರತೆ ನಿವಾರಿಸಬಹುದು ಎಂದರು.
ಮಹಾಪುರುಷರನ್ನು ಸೀಮಿತಗೊಳಿಸದಿರಿ: ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಶಿವಣ್ಣ ಮಾತನಾಡಿ, ಮಹಾ ಪುರುಷರ ಜಯಂತಿ ಕಾರ್ಯಕ್ರಮಗಳನ್ನ ಒಂದು ಸಮುದಾಯಕ್ಕೆ ಸೇರಿದವರು ಆಚರಿಸುವುದಕ್ಕಿಂತ ಸರ್ವರು ಸೇರಿ ಆಚರಿಸುವುದರಿಂದ ಮಹನೀಯರ ಜಯಂತಿಗೆ ಅರ್ಥ ಪೂರ್ಣವಾಗುತ್ತದೆ. ಅದೇ ರೀತಿ ಅವರ ಆದರ್ಶಮಯ ಜೀವನವನ್ನ ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಿದ್ದೇ ಆದರೆ ನಿಜವಾಗಲು ಅವರಿಗೆ ನಾವುಗಳು ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಜಾಗೃತಿ ಮೂಡಿಸಿದ್ದಾರೆ: ತಹಶೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರವರು 68 ಸಾವಿರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಆದರೆ 1,379 ವಚನಗಳು ಲಭ್ಯವಾಗಿದೆ. ಆದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಚನ ಸಾಹಿತ್ಯವನ್ನು ಬರೆಯುವುದು ಸುಲಭದ ಮಾತಲ್ಲ ಎಂದ ಅವರು ಸಿದ್ದರಾಮೇಶ್ವರರ ವಚನ ಬಸವಣ್ಣನವರ ವಚನದಂತೆಯೇ ಸಮಾಜಕ್ಕೆ ಸಂದೇಶ ನೀಡುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಾಳು ಸ್ವಾಮಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಯರಾಂ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ .ನಟರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್, ರಾಷ್ಟ್ರೀಯ ಹಿರಿಯ ಕ್ರೀಡಾಪಟು ಎಚ್.ಟಿ.ಮಹಾದೇವ್ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.