ಬೆಂಗಳೂರು : ಹಂಸಲೇಖ ನೀಡಿರುವ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? ಅವರು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಹಿತಿ ಡಾ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಉಪಸ್ಥಿತರಿದ್ದ ಹಂಸಲೇಖ ಅವರನ್ನು ಸಮರ್ಥಿಸಿಕೊಂಡರು. ಹಂಸಲೇಖ ವಾಸ್ತಿವಿಕ ನೆಲೆಗಟ್ಟಿನಲ್ಲಿ ಮಾತನಾಡಿದರು. ಅದರೂ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಕಳೆದ ತಿಂಗಳು ಹಂಸಲೇಖ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅವರು ಕ್ಷಮೆ ಯಾಚಿಸಿದ ನಂತರವೂ ಬಸವನಗುಡಿ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿವಾದ ತಣ್ಣಗಾಗುತ್ತಿರುವ ಹೊತ್ತಲ್ಲೇ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಮಹತ್ವ ಲಭಿಸಿದೆ.
ಸತ್ಯ ಹೇಳಿದ್ದಕ್ಕೆ ಕೊಂದರು
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಷ್ಟದಲ್ಲಿದೆ. ಅಭಿವ್ಯಕ್ತಿಯ ಹಕ್ಕನ್ನು ಚಲಾಯಿಸಿದರೆ ಕೆಲವರಿಗೆ ಕಹಿಯಾಗುತ್ತದೆ. ನಿಜವಾದ ಕಣ್ಣಿನಿಂದ ನೋಡದೆ ವಕ್ರದೃಷ್ಟಿ ಬೀರುತ್ತಾರೆ. ಸಮಾಜಮುಖಿಯಾಗಿ ಚಿಂತಿಸುವವರು ಇದನ್ನು ಖಂಡಿಸಲೇಬೇಕು. ಡಾ.ಎಂ.ಎಂ.ಕಲಬುರ್ಗಿ ಸತ್ಯ ಹೇಳುವ ಪ್ರಯತ್ನ ನಡೆಸಿದರು. ಸತ್ಯವನ್ನು ಒಪ್ಪದ, ಕೋಮುಭಾವನೆಯಿಂದ ನರಳುವವರು ಅವರನ್ನು ಕೊಂದರು. ದೇಶದ ದುರಂತ ಎಂದರೆ ಮಹಾತ್ಮ ಗಾಂಧಿಯವರನ್ನೇ ಕೊಂದವರನ್ನು ದೇವಸ್ಥಾನದಲ್ಲಿಟ್ಟು ಪೂಜಿಸುವ ಪರಿಪಾಠ ಬೆಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಮನೆಯಲ್ಲಿ ಯಾರೂ ಓದಿರಲಿಲ್ಲ. ನನ್ನ ಸೋದರರು ಈಗಲೂ ಹೊಲದ ಕೆಲಸ ಮಾಡುತ್ತಾರೆ. ಆದರೆ ಊರಿನಲ್ಲಿ ಬೇರೆ ಸಮುದಾಯದವರು ಓದಿಕೊಂಡಿದ್ದರು. ಹೀಗಾಗಿ ನನಗೂ ಓದುವ ಛಲ ಬಂತು. ಬಿಎಸ್ಸಿ ಮುಗಿದ ಮೇಲೆ ಕಾನೂನು ಓದುವುದಕ್ಕೆ ನಿರ್ಧರಿಸಿದೆ. ನಮ್ಮ ತಂದೆ ಊರಿನ ಶಾನುಭೋಗರ ಬಳಿ ಹೋಗಿ ಕೇಳಿದಾಗ “ಕುರುಬರಿಗೆ ಏಕೆ ಲಾ ಓದುʼʼ ಎಂದು ಪ್ರಶ್ನಿಸಿದರು. ಆದರೂ ನಾನು ಛಲ ಬಿಡದೇ ವ್ಯಾಸಂಗ ಮಾಡಿದೆ ಎಂದರು.