ಚಿಕ್ಕಬಳ್ಳಾಪುರ: ಪುಟ್ಕೋಸಿ ವಿರೋಧ ಪಕ್ಷದ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರೆಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಟೀಕಿಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿರೋಧ ಪಕ್ಷದ ಸ್ಥಾನವನ್ನು ಶ್ಯಾಡೋವ್ ಆಫ್ ಸಿಎಂ ಎನ್ನುತ್ತಾರೆ.
ಮುಖ್ಯಮಂತ್ರಿಗಳು, ಸರ್ಕಾರ ಏನೇ ತಪ್ಪು ಮಾಡಿದರೂ ಅದನ್ನು ಬಯಲಿಗೆ ಎಳೆಯುವಂತಹದು, ಒಂದೊಂದು ವಿಷಯಗಳ ಪರಾಮರ್ಶೆ ಮಾಡುವಂತಹದು, ತಪ್ಪುಗಳನ್ನು ಕಂಡು ಹಿಡಿಯುವ ಶಕ್ತಿ, ಅರ್ಹತೆ, ಕಾನೂನು ಬದ್ಧವಾಗಿ ಇರುವಂತಹದು ವಿರೋಧ ಪಕ್ಷದ ಸ್ಥಾನ. ಹೀಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಿದ್ದರೋ ಏನು ಗೊತ್ತಿಲ್ಲ. ಆದರೆ, ವಿರೋಧ ಪಕ್ಷದ ಸ್ಥಾನವನ್ನು ಅವಹೇಳನ ಮಾಡಿ ಹೇಳಿಕೆ ನೀಡಬಾರದಿತ್ತು. ಆ ರೀತಿ ಮಾತನಾಡಿರುವುದು ಅವರಿಗೆ ಮಾತ್ರವಲ್ಲ ಯಾರಿಗೂ ಶೋಭೆ ತರುವುದಿಲ್ಲ ಎಂದು ಗುಡುಗಿದರು.
ಅಗೌರವ ತಂದಿಲ್ಲ: ಮಾಜಿ ಮುಖ್ಯಮಂತ್ರಿಗಳು ಹೇಳಿಕೆ ನೀಡುವಾಗ ಜಾಗೃತಿ ವಹಿಸಬೇಕು. ನನಗೆ ಗೊತ್ತಿರುವ ಪ್ರಕಾರ ಅವರು ವಿರೋಧ ಪಕ್ಷದ ನಾಯಕರಾಗಿರಲಿಲ್ಲ. ಆದರೆ, ಮಾಜಿ ಪ್ರಧಾನಿ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕರು ವಿರೋಧ ಪಕ್ಷದ ನಾಯಕರು ಆಗಿದ್ದರು. ಆ ಸ್ಥಾನಕ್ಕೆ ಅಗೌರವ ತರುವ ಹೇಳಿಕೆ ನೀಡಿರುವುದು ಸೂಕ್ತವಲ್ಲ ಎಂದು ಕಿಡಿಕಾರಿದರು. ಜಿಲ್ಲೆಯ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಕೆಲವು ಕಡೆ ಆಗಿದೆ. ಅನೇಕ ಕೆರೆಗಳಲ್ಲಿ ಆಗಬೇಕಿತ್ತು.
ಇದನ್ನೂ ಓದಿ;- ನಕ್ಸಲರ ವಿರುದ್ಧ ಮಲೆನಾಡಿನಲ್ಲಿ ಎನ್‌ಐಎ ದಾಳಿ
ಎತ್ತಿನಹೊಳೆ ಯೋಜನೆಯಲ್ಲಿ ಕೆರೆಗಳಲ್ಲಿ ಹೂಳೆತ್ತಲು ಸೇರಿಸಿದ್ದೇವೆ. ಕೆರೆಗಳಲ್ಲಿ ನೀರು ತುಂಬಿದ್ದು ಮುಂದಿನ ಬೇಸಿಗೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಅಲ್ಲದೇ, ಮುಂದಿನ ವಾರದೊಳಗೆ ನಗರ-ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ ಆಗುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದ್‌ರೆಡ್ಡಿ(ಬಾಬು), ಸದಸ್ಯ ನಾಗರಾಜ್, ಗಜೇಂದ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದರು. ಯಾವ ಭಾಷೆ ಮತ್ತು ಪದ ಬಳಸಬೇಕು ಎಂಬ ಕನಿಷ್ಠ ಜ್ಞಾನವನ್ನು ಹೊಂದಿರಬೇಕು. ಸಮಾಜ ನಮ್ಮನ್ನು ನೋಡುತ್ತಿದೆ ಎಂಬುದನ್ನು ಮರೆತು ವಿರೋಧ ಪಕ್ಷದ ಸ್ಥಾನದ ಕುರಿತು ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವುದು ಸಮಂಜಸವಲ್ಲ.
ಸುಧಾಕರ್, ಸಚಿವ