ಬೆಂಗಳೂರು : ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಸಲಗ” ಚಿತ್ರತಂಡ ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದೆ.
ಅಕ್ಟೋಬರ್ 14ರಂದು ‘ಸಲಗ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇಂದು ‘ಸಲಗ’ ತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಸಿದ್ದರಾಮಯ್ಯ ಅವರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಇಂದು ನನ್ನನ್ನು ಭೇಟಿ ಮಾಡಿದರು. ಶಾಸಕರಾದ ಬೈರತಿ ಸುರೇಶ್ ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ, ಹೆಚ್ಚಿನ ಶ್ರಮವಹಿಸಿ ಸಿನೆಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ಇನ್ನು ಸಿದ್ದರಾಮಯ್ಯನವರು ಸಲಗ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೂ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ನಮ್ಮ ಚಿತ್ರವನ್ನು ಸಿದ್ದರಾಮಯ್ಯನವರಿಗೆ ತೋರಿಸಬೇಕೆಂದು ದುನಿಯಾ ವಿಜಯ್ ಅವರು ಹೇಳಿಕೊಂಡಿದ್ದಾರೆ. ಅದೇ ಉದ್ದೇಶದಿಂದ ಇಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿರಬಹುದು.