ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ಯುವಕರನ್ನು ಸೆಳೆಯುತ್ತಿದ್ದು ಮುಂದಿನ ದಿನದಲ್ಲಿ ಸಿದ್ದರಾಮಯ್ಯ ಅವರ ಮಗ, ಡಿ.ಕೆ.ಶಿವಕುಮಾರ್ ಅವರ ಮಕ್ಕಳು, ಖರ್ಗೆ ಅವರ ಮಗ ಬಿಜೆಪಿಗೆ ಬರುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಮೈಸೂರಿನ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವಾಸು ಅವರ ಪುತ್ರ ಕವೀಶ್ ಗೌಡ ವಾಸು ಸೇರಿ ಹಳೇ ಮೈಸೂರು ಭಾಗದ ಹಲವು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಮಾತ್ರವಾಗಿಲ್ಲ. ಕಾಂಗ್ರೆಸ್‌ನ ಇನ್ನಿತರ ನಾಯಕರ ಮನೆಗಳಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದೆ.
ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.
Related Articles
ಕಾಂಗ್ರೆಸ್ ಬಸ್ ಹೋಗುತ್ತ ಹೋಗುತ್ತ ಬ್ರೇಕ್ ಫೇಲ್ ಆಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ವಿಜಯಪುರ ತಲುಪುವ ಹೊತ್ತಿಗೆ ಹಾಸನದಲ್ಲಿ ಪಂಕ್ಚರ್ ಆಗಿದೆ. ಈ ಎರಡೂ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲಿದ್ದೇವೆ ಎಂದು ಹೇಳಿದರು.
ಸಚಿವ ಗೋಪಾಲಯ್ಯ ಮಾತನಾಡಿ, ಮೈಸೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದ ಅನೇಕ ಮುಖಂಡರು ಬಿಜೆಪಿಗೆ ಸೇರಲಿದ್ದಾರೆ. ಬಿಜೆಪಿ ಸೇರಿದವರಿಗೆ ಉಜ್ವಲ ಭವಿಷ್ಯವಿದೆ. ಪಕ್ಷ ಸೇರ್ಪಡೆ ಆದವರು ತಮ್ಮ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪಕ್ಷ ಸೇರ್ಪಡೆ ಆದವರ ಪರವಾಗಿ ಮಾತನಾಡಿದ ಕವೀಶ್ ಗೌಡ, ಬಿಜೆಪಿಯ ಸಿದ್ಧಾಂತ, ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದಾಗ ನಾನು ಬಿಜೆಪಿಯಲ್ಲಿ ಇರಬೇಕಿತ್ತು ಎಂದು ಅನಿಸಿತ್ತು. ಪ್ರಧಾನ ಮಂತ್ರಿಯವರ ಅಮೃತ ಕಾಲ ಪರಿಕಲ್ಪನೆ ಅತ್ಯುತ್ತಮವಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಜೆಡಿಎಸ್ ಮುಖಂಡರಾದ ಸೋಮಶೇಖರ್, ಗಿರೀಶ್ ನಾಶಿ, ಕಾಂಗ್ರೆಸ್‌ನ ವೆಂಕಟೇಶ್, ದಿವಾಕರ್ ಗೌಡ, ಸಿ.ವಿ. ರಾಜಪ್ಪ ಹಾಗೂ ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ| ಪುಣ್ಯವತಿ ನಾಗರಾಜ್ ಅವರು ಬಿಜೆಪಿ ಸೇರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.