Advertisement

ಕ್ರೀಯಾಲೋಪದ ಆಸರೆ ವಿಪ್‌ ಜಾರಿ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ

02:55 AM Jul 19, 2019 | sudhir |

ವಿಧಾನಸಭೆ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಡೇ ಆಸರೆಯಾಗಿ ಕಂಡದ್ದು “ಕ್ರಿಯಾಲೋಪ’. ಇದರ ಕುರಿತ ಚರ್ಚೆಯೇ ಇಡೀ ದಿನ ಎಳೆದು, ವಿಶ್ವಾಸಮತದ ವಿಚಾರ ಶುಕ್ರವಾರಕ್ಕೆ
ಮುಂದೂಡಿಕೆಯಾಯಿತು.

Advertisement

ಗುರುವಾರ ಬೆಳಗ್ಗೆಯೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿ ಮಾತನಾಡುತ್ತಿದ್ದಾಗ ಸಂವಿಧಾನದ ಪರಿಚ್ಛೇದ 10ರ ಬಗ್ಗೆ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವಾಸಮತ ಸಂದರ್ಭದಲ್ಲಿ ಸದನದಲ್ಲಿ ಶಾಸಕರ ಕಡ್ಡಾಯ ಹಾಜರಿಗೆ ಒತ್ತಡ ಹೇರಬಾರದು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸಂವಿಧಾನದ ಷೆಡ್ನೂಲ್‌ 10 ರಡಿ ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್‌ ಕೊಡುವ ಹಾಗೂ ಅದನ್ನು ಪಾಲನೆಯಾಗುವಂತೆ ನೋಡಿಕೊಳ್ಳುವ ಅಧಿಕಾರವಿದ್ದರೂ ಅದು ಮೊಟಕುಗೊಂಡಂತಾಗಿದೆ.

ನನ್ನನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರತಿವಾದಿ ಸಹ ಮಾಡಿಲ್ಲ. ಹದಿನೈದು ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಇತ್ಯರ್ಥವಾಗದೆ ವಿಶ್ವಾಸಮತಯಾಚನೆ ಸರಿಯಲ್ಲ. ಹೀಗಾಗಿ, ವಿಶ್ವಾಸಮತ ಮುಂದೂಡಬೇಕು ಎಂದು ಆಗ್ರಹವನ್ನೂ ಮಾಡಿದರು.

ಇದರ ಜತೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡರು, ಹದಿನಾಲ್ಕು ಸದಸ್ಯರು ಸದನಕ್ಕೆ ಹಾಜರಾಗುವಂತಿಲ್ಲ ಎಂದಾದರೆ ಅವರು ಈ ಸದನದ ಸದಸ್ಯರು ಹೌದೋ ಅಲ್ಲವೋ ಎಂಬುದು ಮೊದಲು ಸ್ಪಷ್ಟವಾಗಬೇಕು. ಸರ್ಕಾರದ ಅಳಿವು-ಉಳಿವಿನ ಮಹತ್ವದ ವಿಶ್ವಾಸಮತ ಯಾಚನೆಯಲ್ಲಿ ಅವರ ಭಾಗವಹಿಸುವಿಕೆ ಮುಖ್ಯ ಎಂದು ಪ್ರತಿಪಾದಿಸಿದರು.

ಇದಕ್ಕೆ ಉತ್ತರಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌, ಸಿದ್ದರಾಮಯ್ಯ ಅವರ ಕ್ರಿಯಾಲೋಪ ‌ ಕುರಿತು ಒಂದು ಹಂತದಲ್ಲಿ ನಾನು ಸುಪ್ರೀಂಕೋರ್ಟ್‌ ತೀರ್ಪು ಬಗ್ಗೆ ಮಾತನಾಡುವುದಿಲ್ಲ. ಆದರೆ, ಸದಸ್ಯರ ಹಕ್ಕು ಕುರಿತು ಪ್ರಶ್ನೆ ಎತ್ತಿರುವುದರಿಂದ ಅಡ್ವೊಕೇಟ್‌ ಜನರಲ್‌ ಜತೆ ಚರ್ಚಿಸಿ ರೂಲಿಂಗ್‌ ನೀಡುತ್ತೇನೆ ಎಂದು ಹೇಳಿದರು.

Advertisement

ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಬೋಪಯ್ಯ ಸೇರಿ ಹಲವರು ಕ್ರಿಯಾಲೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಿಶ್ವಾಸಮತ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದಂತೆ ಏನಾದರೂ ಕ್ರಿಯಾಲೋಪ ಇದ್ದರೆ ಅವಕಾಶ ಮಾಡಿಕೊಡುವುದು ಸರಿ.

ಗಂಟೆಗಟ್ಟಲೆ ಅದರ ಮೇಲೆ ಚರ್ಚೆ ಯಾಕೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಚಕಮಕಿ: ಒಂದು ಹಂತದಲ್ಲಿ ಜೆ.ಸಿ.ಮಾಧುಸ್ವಾಮಿ ಹಾಗೂ ಸ್ಪೀಕರ್‌ ನಡುವೆ ಮಾತಿನ ಸಮರವೂ ನಡೆಯಿತು.

ನೀವು ಹೇಳಿದಂತೆ ಅಥವಾ ನೀವು ಅಂದುಕೊಂಡಂತೆ ನಾನು ಈ ಪೀಠದಲ್ಲಿ ಕುಳಿತು ಕಾರ್ಯನಿರ್ವಹಿಸಲು ಆಗುವುದಿಲ್ಲ ಕುಳಿತುಕೊಳ್ಳಿ ಎಂದು ಜೆ.ಸಿ.ಮಾಧುಸ್ವಾಮಿಯವರನ್ನು ಕುರಿತು ಸ್ಪೀಕರ್‌ ಸುಮ್ಮನಾಗಿಸಿದರು. ಇಡೀ ದಿನ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ದಾಳಿಗೆ ಬಿಜೆಪಿ ಪರವಾಗಿ ಜೆ.ಸಿ.ಮಾಧುಸ್ವಾಮಿ ಪ್ರತಿದಾಳಿ ನಡೆಸಿದರು. ಯಡಿಯೂರಪ್ಪ ಅವರು ಸಹ ಹಲವಾರು ಬಾರಿ ಕ್ರಿಯಾಲೋಪ ಕುರಿತು ಚರ್ಚೆಗೆ ಅವಕಾಶ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಿಶ್ವಾಸಮತ ಯಾಚನೆಗೆ ಕರೆದಿದ್ದು ಅದಕ್ಕೆ ಮಾತ್ರ
ಸೀಮಿತವಾಗಬೇಕು. ಸುಪ್ರೀಂಕೋರ್ಟ್‌ ವಿಚಾರ ಇಲ್ಲಿ ಪ್ರಸ್ತಾಪಿಸುವುದು
ಬೇಡ ಎಂದು ಹೇಳಿದರು.

ನ್ಯಾಯಾಂಗ-ಶಾಸಕಾಂಗದ ಸಂಘರ್ಷ: ಸಿಎಂ ಕುಮಾರಸ್ವಾಮಿಯವರ
ವಿಶ್ವಾಸಮತಯಾಚನೆ ನಿರ್ಣಯ ವಿಚಾರ ಇದೀಗ ನ್ಯಾಯಾಂಗ ಹಾಗೂ
ಶಾಸಕಾಂಗದ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ.

ಸುಪ್ರೀಂಕೋರ್ಟ್‌ ತೀರ್ಪು ಹಾಗೂ ವ್ಯಾಪ್ತಿ, ಶಾಸಕಾಂಗದ ಕಾರ್ಯನಿರ್ವಹಣೆ, ರಾಜ್ಯಪಾಲರ ಮಧ್ಯಪ್ರವೇಶ, ಸ್ಪೀಕರ್‌ ಕಾರ್ಯವ್ಯಾಪ್ತಿ, ಸದಸ್ಯರ ಹಕ್ಕು, ಶಾಸಕಾಂಗ ಪಕ್ಷದ ನಾಯಕರ ಹೊಣೆಗಾರಿಕೆ ವಿಚಾರಗಳು ಗುರುವಾರದ ಇಡೀ ದಿನದ ಕಲಾಪದಲ್ಲಿ ಪ್ರತಿಧ್ವನಿಸಿ ಜಿಜ್ಞಾಸೆಯಾಗಿ ಕಾಡಿತು.

ಸಂವಿಧಾನದ ಪರಿಚ್ಛೇಧ 10 ರ ಪ್ರಕಾರ ಶಾಸಕಾಂಗ ಪಕ್ಷದ ನಾಯಕನಿಗೆ
ತಮ್ಮ ಸದಸ್ಯರಿಗೆ ವಿಪ್‌ ನೀಡುವ ಅಧಿಕಾರ ಇದೆಯೋ ಇಲ್ಲವೋ ಎಂಬ
ವಿಚಾರವೇ ಪ್ರಮುಖವಾಗಿ ಮುನ್ನಲೆಗೆ ಬಂದಿದ್ದು, ಸುಪ್ರೀಂಕೋರ್ಟ್‌
ಶಾಸಕರ ರಾಜೀನಾಮೆ ಅಂಗೀಕಾರ ಪ್ರಕರಣದಲ್ಲಿ ವಿಪ್‌ ಬಗ್ಗೆ ಪ್ರಸ್ತಾಪವೇ
ಮಾಡದಿರುವುದು ಆಕ್ಷೇಪಕ್ಕೂ ಕಾರಣವಾಯಿತು.

ಹದಿನೈದು ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಅನರ್ಹತೆ
ವಿಚಾರ ಇತ್ಯರ್ಥವಾಗದೆ ವಿಶ್ವಾಸಮತ ಯಾಚನೆ ಸರಿಯಲ್ಲ.
ಮುಂದೂಡಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ
ಸಿದ್ದರಾಮಯ್ಯ ಅವರು ಸ್ಪೀಕರ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಒಂದು ಹಂತದಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಸಹ,
ಶಾಸಕರು ಸದನಕ್ಕೆ ಹಾಜರಾಗಲು ಒತ್ತಡ ಹೇರುವಂತಿಲ್ಲ ಎಂದು
ಸುಪ್ರೀಂಕೋರ್ಟ್‌ ಹೇಳಿದೆ. ಅಧಿವೇಶನಕ್ಕೆ ಬರುವಂತೆ ನಾನೇ ಎಲ್ಲ
ಶಾಸಕರಿಗೂ ಪತ್ರ ಬರೆದಿದ್ದೇನೆ. ಇದೀಗ ಯಾರು ಅವರ ಮೇಲೆ ಒತ್ತಡ
ಹೇರುತ್ತಿದ್ದಾರೆ ಎಂಬುದು ಹಾಗೂ ನನ್ನನ್ನು ಸುಪ್ರೀಂಕೋರ್ಟ್‌ನಲ್ಲಿ
ಪ್ರತಿವಾದಿ ಮಾಡಿರುವುದರಿಂದ ನಾನೂ ಯಾವುದು ಪಾಲನೆ
ಮಾಡಬೇಕು ಎಂಬುದರ ಬಗ್ಗೆ ಕಾನೂನು ತಜ್ಞರ ಮೊರೆ ಹೋಗುವಂತಾಗಿದೆ
ಎಂದು ತಿಳಿಸಿದರು. ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು,
ಸುಪ್ರೀಂಕೋರ್ಟ್‌ ಸಂವಿಧಾನದ ಷೆಡ್ನೂಲ್‌ 10 ಪ್ರಕಾರ ವಿಪ್‌ ಕುರಿತು
ಯಾವುದೇ ಪ್ರಸ್ತಾಪ ಮಾಡದೆ ಈ ಸದನದ ಹಕ್ಕು ಕಸಿದಿದೆ. ಶಾಸಕರು
ಸದನಕ್ಕೆ ಹಾಜರಾಗುವಂತಿಲ್ಲ ಎಂದು ಹೇಳುವುದಾದರೆ ಪಕ್ಷ, ವಿಪ್‌,
ಸ್ಪೀಕರ್‌, ಸದನ ಈ ಎಲ್ಲವೂ ಯಾಕಿರಬೇಕು ಎಂಬ ಮೂಲಪ್ರಶ್ನೆ
ಉದ್ಭವಿಸುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next