Advertisement
ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ತೀವ್ರ ನಷ್ಟವಾಗಲಿದೆ. ಮುಂದಿನ 4 ವರ್ಷ ಈ ಮೈತ್ರಿ ಸರ್ಕಾರ ಮುಂದುವರಿಕೆ ಬೇಡ. ಇಲ್ಲವೇ ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ಆಗಲಿ ಎಂದು ಸಿದ್ದರಾಮಯ್ಯ ರಾಹುಲ್ ಮುಂದೆ ಪ್ರತಿಪಾದನೆ ಮಾಡಿದ್ದಾರೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಿಂದ ಹೆಚ್ಚು ಲಾಭ ನಿರೀಕ್ಷೆ ಮಾಡುವಂತಿಲ್ಲ ಎಂಬ ಅಭಿಪ್ರಾಯವನ್ನೂ ರಾಹುಲ್ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
Related Articles
Advertisement
ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಬಲಗೊಳಿಸುವ ಕಸರತ್ತು ನಡೆಯುತ್ತಿರುವುದರಿಂದ ಕರ್ನಾಟಕದಲ್ಲಿ ಹಾಲಿ ಇರುವ ಮೈತ್ರಿಯಲ್ಲಿ ಗೊಂದಲ ಸಷ್ಟಿಸುವುದರಿಂದ ದೇಶಾದ್ಯಂತ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಚುನಾವಣೆ ಫಲಿತಾಂಶದ ನಂತರ ರಾಷ್ಟ್ರ ರಾಜಕಾರಣದಲ್ಲಿ ನಡೆಯುವ ರಾಜಕೀಯ ಧ್ರುವೀ ಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಬುದ್ದಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಸಿದ್ದು ಟ್ವೀಟ್‌ಗೆ ಅಸಮಾಧಾನ: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬದಲಾವಣೆಯ ಕುರಿತು ಮಾಡಿರುವ ಟ್ವೀಟ್ ಬಗ್ಗೆ ರಾಹುಲ್ ಗಾಂಧಿ ಗರಂ ಆಗಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ತಮ್ಮ ನಡೆಯನ್ನು ಸಮ ರ್ಥಿಸಿಕೊಂಡಿದ್ದು, ಜೆಡಿಎಸ್‌ನವರು ಅನಗತ್ಯ ಗೊಂದಲ ಸೃಷ್ಟಿಸಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮೊದಲು ಈ ರೀತಿಯ ಹೇಳಿಕೆಗಳಿಂದ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ಪ್ರಯತ್ನಕ್ಕೆ ಧಕ್ಕೆಯಾಗುತ್ತದೆ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಪಕ್ಷ ಸಂಘಟನೆ ಚುರುಕುಗೊಳಿಸಲು ಸೂಚನೆ: ಲೋಕಸಭೆ ಚುನಾವಣೆ ಬಂದ ನಂತರ ಮೈತ್ರಿ ಸರ್ಕಾರದ ಆಡಳಿತ ಯಂತ್ರದ ಜೊತೆಗೆ ಪಕ್ಷ ಸಂಘಟ ನೆಯನ್ನು ಚುರುಕುಗೊಳಿಸಿ, ಅನಗತ್ಯ ಗೊಂದಲ ಗಳಿಗೆ ಬ್ರೇಕ್ ಹಾಕುವಂತೆ ರಾಹುಲ್ ಗಾಂಧಿ ತಾಕೀತು ಮಾಡಿದ್ದಾರೆ. ಮೇ 23 ರ ನಂತರ ಎರಡೂ ಪಕ್ಷಗಳ ನಾಯಕರು ಸಭೆ ಸೇರಿ ಗೊಂದಲಗಳಿಗೆ ತೆರೆ ಎಳೆದು, ಮಹತ್ವದ ಯೋಜನೆಗಳ ಅನುಷ್ಠಾನದ ಕಡೆಗೆ ಗಮನ ನೀಡುವಂತೆ ಸೂಚಿಸಿದ್ದಾರೆ.
ಪಕ್ಷದ ಸಂಘಟನೆ ದೃಷ್ಟಿಯಿಂದ ಗೊಂದಲಗಳಿಗೆ ಅವಕಾಶ ನೀಡದೇ ತಳ ಮಟ್ಟದಿಂದ ಪಕ್ಷವನ್ನು ಬಲಗೊಳಿಸಿ, ಯಾವುದೇ ನಾಯಕರಾದರೂ ಮೈತ್ರಿ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡಿದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರಾಹುಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೈತ್ರಿಯಿಂದ ನಷ್ಟವೇ ಹೆಚ್ಚು
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಮಂಡ್ಯ ಹೊರತು ಪಡೆಸಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಮಂಡ್ಯದಲ್ಲಿ ಮಾತ್ರ ಸ್ಥಳೀಯ ನಾಯಕರು ಮೈತ್ರಿ ಅಭ್ಯರ್ಥಿ ಪರವಾಗಿ ಬಹಿರಂಗವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳದೇ ತಟಸ್ಥ ಧೋರಣೆ ಅನುಸರಿಸಿದ್ದಾರೆ.
ಆದರೆ, ಜೆಡಿಎಸ್‌ನವರು ಕಾಂಗ್ರೆಸ್‌ನ ಯಾವ ಅಭ್ಯರ್ಥಿ ಪರವಾಗಿಯೂ ಬಹಿರಂಗವಾಗಿ ಬೆಂಬಲಿಸದೇ ತಟಸ್ಥ ಧೋರಣೆ ಅನುಸರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು 13 ರಿಂದ 14 ಸ್ಥಾನ ಗೆಲ್ಲುವ ಬಗ್ಗೆ ಹೈ ಕಮಾಂಡ್‌ಗೆ ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯ ನಾಯಕರ ದೂರುಗಳಿಗೆ ಪೂರಕವಾಗಿ ಸ್ಪಂದಿಸಿರುವ ರಾಹುಲ್ ಗಾಂಧಿ ಜೆಡಿಎಸ್ ನಾಯಕರಿಂದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ ಜೊತೆ ಚರ್ಚಿಸಿ, ಪಕ್ಷದ ಶಾಸಕರ ಬೇಡಿಕೆಗಳಿಗೂ ಸ್ಪಂದಿಸುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ವಿರುದ್ಧ ದೂರು
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜೆಡಿಎಸ್ ನಾಯಕರು ವಿಶೇಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ ಮಾನ್ಯತೆ ನೀಡುತ್ತಿಲ್ಲ. ಅದರಿಂದ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಹಳೆ ಮೈಸೂರು ಭಾಗದಲ್ಲಿ ಮೈತ್ರಿಯಿಂದ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಆ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರನ್ನು ಜೆಡಿಎಸ್ ಶಾಸಕರು ಹಾಗೂ ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ನಷ್ಟ ಉಂಟಾಗಿದ್ದು, ಅದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಸಿದ್ದರಾಮಯ್ಯ ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.