Advertisement
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಬರೆದಿರುವ ಪತ್ರದ ಪ್ರತಿಯನ್ನೂ ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದ ಜತೆ ಲಗತ್ತಿಸಿದ್ದಾರೆ. ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಮಾತುಕತೆಯ ಮೂಲಕವೇ ವಿವಾದವನ್ನು ಬಗೆ ಹರಿಸುವ ಕುರಿತಂತೆ ತಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೀರಿ ಎಂಬ ವಿಶ್ವಾಸ ಇದೆ. ಮಹದಾಯಿ ನ್ಯಾಯಾಧಿಕರಣದ ಅಂತಿಮ ವಿಚಾರಣೆ 2018 ರ ಫೆಬ್ರವರಿ 6 ರಿಂದ 21 ರ ವರೆಗೆ ನಡೆಯಲಿದ್ದು, ಅದಕ್ಕೂ ಮೊದಲು ವಿವಾದವನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ನೀವು ಸಹಮತ ವ್ಯಕ್ತಪಡಿಸುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಗೋವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಹದಾಯಿ ವಿವಾದ ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ದಿನಾಂಕ ನಿಗದಿಪಡಿಸುವಂತೆ ಕೋರಿದ್ದಾರೆ. ಗೋವಾ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮತ್ತೂಮ್ಮೆ ತಾವೇ ಖುದ್ದಾಗಿ ಪತ್ರ ಬರೆದು ಜತೆಗೆ ಗೋವಾ ಮುಖ್ಯ ಕಾರ್ಯದರ್ಶಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಕಡೆಯಿಂದ ಪತ್ರ ಬರೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
Related Articles
2016 ರಲ್ಲಿಯೇ ಮಹದಾಯಿ ನ್ಯಾಯಾಧಿಕರಣದ ನಿರ್ದೇಶನದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಆದರೆ, ಆ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಕೊನೆ ಗಳಿಗೆಯಲ್ಲಿ ಸಭೆಗೆ ಹಾಜರಾಗಲು ನಿರಾಕರಿಸಿದ್ದರು. ಹೀಗಾಗಿ ನ್ಯಾಯಾಧೀಕರಣದ ಹೊರಗೆ ಮಾತುಕತೆಯ ಮೂಲಕವೇ ಮಹದಾಯಿ ವಿವಾದ ಬಗೆ ಹರಿಸಿಕೊಳ್ಳುವ ಮೊದಲ ಪ್ರಯತ್ನ ವಿಫಲವಾಗಿತ್ತು.
Advertisement
ನಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಮಾತುಕತೆಗೆ ದಿನಾಂಕ ನಿಗದಿ ಮಾಡುವಂತೆ ಪತ್ರ ಬರೆದಿದ್ದರು. ಅಲ್ಲದೇ ರಾಜ್ಯದ ಮುಖ್ಯ ಕಾರ್ಯದರ್ಶಿಯೂ ಗೋವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಗೋವಾ ಸರ್ಕಾರ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ.
ಡಿಸೆಂಬರ್ 20 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಮಾತುಕತೆಯ ಮೂಲಕ ವಿವಾದ ಬಗೆ ಹರಿಸಿಕೊಳ್ಳಲು ಸಹಮತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಪತ್ರ ಬರೆದಿದ್ದರು.
ಸಿಎಸ್ ಪತ್ರದಲ್ಲೇನಿದೆಮಹದಾಯಿ ಮಾತುಕತೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಧರ್ಮೆಂದ್ರ ಶರ್ಮಾಗೆ ಪತ್ರ ಬರೆದಿದ್ದು, ಮಾತುಕತೆಗೆ ಶೀಘ್ರವೇ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಗೋವಾ ಮುಖ್ಯಮಂತ್ರಿಗೆ ಅನುಕೂಲವಾಗುವ ಸ್ಥಳದಲ್ಲಿಯೇ ಮಾತುಕತೆಗೆ ಸ್ಥಳ ನಿಗದಿ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಬರ ಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿನ ಅಗತ್ಯತೆ ಇರುವುದರಿಂದ ಆದಷ್ಟು ಬೇಗ ಮಾತುಕತೆಯ ದಿನಾಂಕ ನಿಗದಿ ಮಾಡುವಂತೆ ಪತ್ರದಲ್ಲಿ ಕೋರಿದ್ದಾರೆ.