ಬೆಂಗಳೂರು: ಬೆಳಗಾವಿ ಜಿಲ್ಲೆ ತಿಮ್ಮಾಪುರದಲ್ಲಿರುವ ಪರಮಾನಂದ ಆಶ್ರಮಕ್ಕೆ 200 ಕೋಟಿ ರೂ. ಅನುದಾನ ಮಂಜೂರು ಮಾಡಿಕೊಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನು ನಕಲು ಮಾಡಿ ಪತ್ರ ಸೃಷ್ಟಿಸಿದ್ದ ಆರೋಪ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸ್ಟೆನೋಗ್ರಾಫರ್ ಗುರುನಾಥ (32) ಹಾಗೂ ಸಿದ್ಧರೂಢ ಸಂಗೊಳ್ಳಿ (32) ಬಂಧಿತರು. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಮಾನಂದ ಅಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ಸಿದ್ಧರೂಢ ಹಾಗೂ ಸ್ಟೆನೋಗ್ರಾಫರ್ ಗುರುನಾಥ್ ಮುಖ್ಯಮಂತ್ರಿಗಳ ನಕಲಿ ಶಿಫಾರಸು ಪತ್ರ ಬಳಸಿ 200 ಕೋಟಿ ರೂ. ಅನುದಾನ ಪಡೆಯಲು ಸಂಚು ರೂಪಿಸಿದ್ದರು. ಅದರಂತೆ ಅಂದಿನ ಮುಖ್ಯಮಂತ್ರಿಗಳ ಸಹಿಯನ್ನು ನಕಲು ಮಾಡಿ ಪರಮಾನಂದ ಆಶ್ರಮದ ಅಭಿವೃದ್ಧಿಗೆ 200 ಕೋಟಿ ರೂ. ನೀಡಿ ಎಂಬ ವಿವರವುಳ್ಳ ಶಿಫಾರಸು ಪತ್ರಗಳನ್ನು 2017ರ ಸೆಪ್ಟೆಂಬರ್, 2018ರ ಜನವರಿ, ಫೆಬ್ರವರಿಯಲ್ಲಿ ಮೂರು ಪ್ರತ್ಯೇಕ ಪತ್ರಗಳನ್ನು ಕಳುಹಿಸಿಕೊಡಲಾಗಿತ್ತು.
ಈ ಬಗ್ಗೆ ಆರ್ಥಿಕ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಳುಹಿಸಿಕೊಟ್ಟ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಮೂರು ಪತ್ರಗಳು ನಕಲಿ ಎಂದು ಕಂಡು ಬಂದಿತ್ತು. ಹೀಗಾಗಿ ಇಲಾಖಾ ಉಪ ಕಾರ್ಯದರ್ಶಿ ಎನ್.ಆರ್.ಎರೆಕುಪ್ಪಿ ಅವರು ಕಳೆದ ಮಾ. 17ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇತ್ತೀಚೆಗೆ ಈ ಪ್ರಕರಣ ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾವಣೆಯಾಗಿತ್ತು.