Advertisement

ಕೋವಿಡ್ ನಿಂದ ಮರಣ ಹೊಂದಿದ ಆಶಾ, ಅಂಗನವಾಡಿ ಕಾರ್ಯಕರ್ತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಿ

12:16 PM May 29, 2021 | Team Udayavani |

ಬೆಂಗಳೂರು: ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿರುವ ಮತ್ತು ಕರ್ತವ್ಯದ ವೇಳೆ ಮರಣ ಹೊಂದಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಕುಟುಂಬದವರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೋವಿಡ್ ವಾರಿಯರ್ಸ್‍ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಕೊರೋನ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ವಿಶೇಷ ರಕ್ಷಣೆಯನ್ನು ನೀಡಬೇಕಾದುದು ಸರ್ಕಾರದ ಪ್ರಧಾನ ಜವಾಬ್ಧಾರಿ. ಆದರೆ ಸರ್ಕಾರ ಇನ್ನೂ ಸಹ ಹಲವು ಇಲಾಖೆಗಳ ಸಿಬ್ಬಂದಿಗಳನ್ನು ಕೊರೋನ ವಾರಿಯರ್ಸ್ ಎಂದು ಘೋಷಣೆ ಮಾಡಿಲ್ಲ. ಈಗಾಗಲೇ ಕೊರೋನ ವಾರಿಯರ್ಸ್ ಎಂದು ಘೋಷಿಸಿರುವವರಿಗೆ ಕಳೆದ ಎರಡು ಮೂರು ತಿಂಗಳಿಂದ ಸಂಬಳವನ್ನೂ ನೀಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ತರಿಕೇರೆ: ಕಲ್ಲು ತೂರಾಟ ನಡೆಸಿ ಆ್ಯಂಬುಲೆನ್ಸ್ ಗಾಜು ಒಡೆದ ಕಿಡಿಗೇಡಿಗಳು

ಜನರ, ರೋಗಿಗಳ ಸಂಪರ್ಕದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸರ್ಕಾರದ ತಳ ಮಟ್ಟದ ಸಿಬ್ಬಂದಿಗಳಿಗೆ ಕೊರೋನಾದಿಂದ ರಕ್ಷಣೆ ಪಡೆಯಲು ನೀಡಬೇಕಾದ ಮಾಸ್ಕು, ಸ್ಯಾನಿಟೈಸರ್, ಕೈಗವಸು ಮುಂತಾದ ಮೂಲಭೂತವಾದ ಸಾಮಗ್ರಿಗಳನ್ನೂ ನೀಡಿಲ್ಲ. ಕೊರೋನ ವಾರಿಯರ್ಸ್ ಎಂದು ಘೋಷಣೆ ಮಾಡಲಾದವರಲ್ಲಿ ಕೆಲವರು ಮರಣ ಹೊಂದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಸುಮಾರು ಜನ ಕೊರೋನಾಕ್ಕೆ ತುತ್ತಾಗಿ ಮರಣ ಹೊಂದಿದ್ದಾರೆ. ಆದರೆ ಅವರಲ್ಲಿ ಪರಿಹಾರ ಸಿಕ್ಕಿರುವುದು ಕೇವಲ ಮೂರು ಜನರ ಕುಟುಂಬಗಳಿಗೆ ಮಾತ್ರ. ಎಲ್ಲ ಇಲಾಖೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಇವರೆಲ್ಲರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯವಾಗಿದೆ. ದೇಶದ ರಾಜ್ಯಗಳಲ್ಲೆ ಆರ್ಥಿಕ ಸ್ಥಿತಿಯಲ್ಲಿ ಮೊದಲೆರಡು ಸ್ಥಾನಗಳಲ್ಲೇ ಇರುವ ಕರ್ನಾಟಕದಲ್ಲಿ ಕನಿಷ್ಠ ಮಾಸ್ಕ್, ಸ್ಯಾನಿಟೈಸರ್ ನೀಡುವಷ್ಟು ಹೃದಯವಂತಿಕೆ, ಕರ್ತವ್ಯ ಪ್ರಜ್ಞೆ, ಉದಾರತೆಗಳನ್ನು ಆಡಳಿತ ನಡೆಸುವ ಸರ್ಕಾರ ಕಳೆದುಕೊಂಡಿರುವುದು ಅತ್ಯಂತ ಬೇಜವಾಬ್ಧಾರಿಯುತವಾದ ಹಾಗೂ ಅವಮಾನಕರವಾದ ಸಂಗತಿ. ಆದ್ದರಿಂದ ಕೂಡಲೇ ಅವರ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕೆಂದು ಆಗ್ರಹಿಸುತ್ತೇನೆ. ಜನರ ಜೊತೆ ನೇರ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುವ ಪಶು ವೈದ್ಯರು ಸೇರಿದಂತೆ ಇತರೆ ಎಲ್ಲರನ್ನು ಕೋವಿಡ್ ವಾರಿಯರ್ಸ್ ಎಂದು ಅಧಿಸೂಚನೆ ಹೊರಡಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಕೊರೋನ ವಾರಿಯರ್ಸ್ ಎಂದು ಘೋಷಣೆ ಮಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಇತರೆ  ಸಿಬ್ಬಂದಿಗಳಲ್ಲಿ ಹಲವರು ಮರಣ ಹೊಂದಿದ್ದಾರೆ. ಅವರಲ್ಲಿ ಬಹುತೇಕರ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಅವರೆಲ್ಲರಿಗೆ ಕೂಡಲೇ ಪರಿಹಾರ ನೀಡಬೇಕು. ಈ ಎಲ್ಲ ಸಿಬ್ಬಂದಿಗಳಿಗೆ ಮಾರ್ಚ್ ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ತಾಂತ್ರಿಕ ಕಾರಣಗಳನ್ನು ನೀಡಿ ಕೊರೋನ ಕಾಲದಲ್ಲೂ ಸಂಬಳ ನೀಡದಿರುವುದು ಅತ್ಯಂತ ಅಮಾನವೀಯ. ಕೂಡಲೇ ಈ ಎಲ್ಲರಿಗೆ ಸಂಬಳ ಬಿಡುಗಡೆ ಮಾಡಬೇಕು. ಪಲ್ಸ್ ಆಕ್ಸಿಮೀಟರ್‍ನಂಥ ಅತ್ಯಂತ ಅಗತ್ಯ ಸಾಮಗ್ರಿಗಳನ್ನು ಒಂದು ಪಂಚಾಯತಿ/ ಒಬ್ಬರು ಆಶಾ ಕಾರ್ಯಕರ್ತೆಗೆ ಕೇವಲ ಒಂದೊಂದನ್ನು ಮಾತ್ರ ನೀಡಲಾಗಿದೆ. ಹೀಗೆ ಮಾಡುವುದರಿಂದಲೂ ಸೋಂಕು ಹಬ್ಬಲು ಕಾರಣವಾಗಬಹುದು. ಆದ್ದರಿಂದ ಇಂಥ ಸಾಮಾನ್ಯ ಸಂಗತಿಗಳನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ ಸಾಮಗ್ರಿಗಳನ್ನು ಕೋವಿಡ್ ವಾರಿಯರ್ಸ್‍ಗಳಿಗೆ ಒದಗಿಸಿಕೊಡಬೇಕು ಎಂದಿದ್ದಾರೆ.

ಇವರೆಲ್ಲರಿಗೆ ಸೂಕ್ತವಾದ, ಗೌರವಯುತವಾದ ಸಂಬಳ, ಗೌರವಧನ, ಸಂಭಾವನೆಯನ್ನು ಹೆಚ್ಚಿಸಬೇಕು. ಕೊರೋನಾದಂಥ ಮಾರಣಾಂತಿಕವಾದ ಸೋಂಕನ್ನು ನಿಭಾಯಿಸುವಲ್ಲಿ ಮಾನವ ಸಂಪನ್ಮೂಲದ ಪಾತ್ರ ಬಹಳ ದೊಡ್ಡದು. ಅವರುಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕಾದುದು ಸರ್ಕಾರದ ಜವಾಬ್ಧಾರಿ ಎಂದು ಭಾವಿಸಿ ಕೂಡಲೇ ಈಡೇರಿಸಬೇಕೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next