ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೇ ಸ್ಪರ್ಧಿಸಿದರೂ ಗೆಲ್ಲೋದಿಲ್ಲ. ಅವರು ಪಾಕಿಸ್ತಾನ, ಅಫಘಾನಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಕೋಲಾರದಲ್ಲಿ ಸ್ಪ ರ್ಧಿಸುವುದಾಗಿ ಹೇಳುತ್ತಿದ್ದ ಸಿದ್ದರಾಮಯ್ಯ, ಇದೀಗ ಎಐಸಿಸಿ ಮುಖಂಡ ರಾಹುಲ್‌ಗಾಂ ಧಿ ಸೂಚನೆ ಮೇರೆಗೆ ವಾಪಸ್ ವರುಣಾ ಕ್ಷೇತ್ರಕ್ಕೆ ಹೋಗುವುದಾಗಿ ತಿಳಿಸಿದ್ದಾರೆ.
ಆದರೆ, ಅವರು ವರುಣಾ ಕ್ಷೇತ್ರವಲ್ಲ. ಪಾಕಿಸ್ತಾನ, ಅಫಘಾನಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧೆ ಮಾಡಬೇಕು. ಬಹುಶಃ ಆ ದೇಶಗಳಲ್ಲಿ ಅವರು ಗೆಲ್ಲಬಹುದು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಈಗಾಗಲೇ ವರುಣಾ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಇದೀಗ ಬಾದಾಮಿ ಬಿಟ್ಟು ಓಡಿ ಬಂದಿದ್ದಾರೆ. ಕೋಲಾರದಲ್ಲಿ ಗೆಲ್ಲುವುದು ಕಷ್ಟವಿದೆ. ಹೀಗಾಗಿ ಪುನಃ ವರುಣಾ ಕ್ಷೇತ್ರದ ಕಡೆ ಮುಖ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶ ನೋಡಿಕೊಳ್ಳುವುದು ಒಳ್ಳೆಯದು. ಸಿದ್ದರಾಮಯ್ಯರನ್ನು ಈ ಬಾರಿ ಸೋಲಿಸುವ ಜವಾಬ್ದಾರಿಯನ್ನು ಅವರದೇ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೊತ್ತುಕೊಂಡಿದ್ದಾರೆ ಎಂದರು.
ವಸತಿ ಸಚಿವ ವಿ.ಸೋಮಣ್ಣ, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಪಕ್ಷ ಬಿಡಲ್ಲ. ಸೋಮಣ್ಣರ ಸಿಟ್ಟು ಶೇ.100ರಷ್ಟು ಶಮನವಾಗಿದೆ. ಅವರು ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಸಹ ಪಕ್ಷ ಬಿಡಲ್ಲ ಎಂದ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಯಾತ್ರೆ ಮೂಲಕ ಜನ ಜಾಗೃತಿ ಮಾಡುತ್ತಿದ್ದೇವೆ. 224 ಕ್ಷೇತ್ರಗಳನ್ನು ತಲುಪಿರುವುದು ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಿಟ್ಟರೆ ಮೂರನೇ ಲೀಡರ್ ಇಲ್ಲ. ಅವರು 224 ಕ್ಷೇತ್ರಕ್ಕೆ ಹೋಗಿಲ್ಲ, ಟಿಕೆಟ್ ಹಂಚಿಕೆಯಲ್ಲಿ ಬ್ಯುಸಿ ಇದ್ದಾರೆ.
ಕಾಂಗ್ರೆಸ್‌ನವರು ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕು ಎಂಬ ಕನಸು ಕಾಣುತ್ತಿದ್ದಾರೆ. ಅದು ಸಾಧ್ಯವಾಗದು ಎಂದರು.