Advertisement

ಕಾಂಗ್ರೆಸ್‌ನಲ್ಲಿ ಮತ್ತೆ “ಹಿಡಿತ’ಹೆಚ್ಚಿಸಿಕೊಂಡ ಸಿದ್ದರಾಮಯ್ಯ

06:20 AM Sep 24, 2018 | Team Udayavani |

ಬೆಂಗಳೂರು:ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ ಹಾಗೂ ಸರ್ಕಾರದಲ್ಲಿ ಮತ್ತೆ ತಮ್ಮ ಹಿಡಿತಕ್ಕೆ ಹೆಚ್ಚಿಸಿಕೊಳ್ಳಲು ಆರಂಭಿಸಿದ್ದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತೆರೆಮರೆಗೆ ಸರಿಯುವಂತಾಗಿದೆ.

Advertisement

ಇತ್ತೀಚೆಗಿನ ವಿದ್ಯಮಾನಗಳಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಹ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಬಂಡಾಯ ಸಾರಿರುವ ಪಕ್ಷದ ಶಾಸಕರನ್ನು ಸಮಾಧಾನಪಡಿಸಿಲು ಅಂತಿಮವಾಗಿ ಸಿದ್ದರಾಮಯ್ಯ ಮೊರೆ ಹೋಗಿದ್ದು ಇದಕ್ಕೆ ಸಾಕ್ಷಿ.

ಆಪರೇಷನ್‌ ಕಮಲ ಕಾರ್ಯಾಚರಣೆ ತಡೆಯುವ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪೂರ್ಣಪ್ರಮಾಣದಲ್ಲಿ ಸಫ‌ಲವಾಗಲಿಲ್ಲ. ಇದನ್ನು ಮನಗಂಡ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಹೆಗಲಿಗೆ ಹೊಣೆ ಹೊರಿಸಿದೆ ಎಂದು ಹೇಳಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸಹ ದೆಹಲಿಗೆ ಕರೆಸಿಕೊಂಡು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗಬಾರದು. ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಹೋಗದಂತೆ ತಡೆಯಬೇಕು. ರಾಜ್ಯ ನಾಯಕರ ಜತೆಗೂಡಿ ನೀವೇ ಆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಕಾರ್ಯಾಧ್ಯಕ್ಷ  ಈಶ್ವರ್‌ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ದೌಡಾಯಿಸಿದರು. ಸಿದ್ದರಾಮಯ್ಯ ಅವರ ರಂಗಪ್ರವೇಶದ ನಂತರವಷ್ಟೇ ಜಾರಕಿಹೊಳಿ ಸಹೋದರರ ಅಸಮಾಧಾನ ಸೇರಿ ಅತೃಪ್ತ ಕಾಂಗ್ರೆಸ್‌ ಶಾಸಕರ ಬಂಡಾಯ ತಣ್ಣಗಾಯಿತು.

Advertisement

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ  ಒಂದು ಹಂತದಲ್ಲಿ ಸಿದ್ದರಾಮಯ್ಯ ಮೂಲೆಗುಂಪಾದಂತೆ ಕಂಡುಬಂದಿತ್ತು. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್‌ ಅವರು ಪಕ್ಷದಲ್ಲೂ ತಮ್ಮ ಹಿಡಿತ ಸಾಧಿಸಲು ಲೋಕಸಭೆ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ ಉಪ ಮುಖ್ಯಮಂತ್ರಿಯಾಗಿ ಪಕ್ಷ ಹಾಗೂ ಸರ್ಕಾರದ ಮೇಲೂ ಹಿಡಿತ ಇಟ್ಟುಕೊಂಡು ಶಕ್ತಿಕೇಂದ್ರವಾಗಲು ಯತ್ನಿಸಿದರು.

ಆದರೆ, ಕ್ಷೇತ್ರಗಳ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ್‌ ಅವರ ಬಳಿ ಹೋದರೆ ಸ್ಪಂದಿಸುವುದಿಲ್ಲ ಎಂಬ ಆರೋಪ ಹೆಚ್ಚಾಯಿತು. ಅತ್ತ ಕೆಪಿಸಿಸಿ ಅಧ್ಯಕ್ಷರೂ ಮಾತೂ ಸರ್ಕಾರ ಹಾಗೂ ಪಕ್ಷದಲ್ಲಿ ನಡೆಯುತ್ತಿಲ್ಲ ಎಂಬಂತಾಯಿತು.

ಹೀಗಾಗಿ ಬೇಸತ್ತ ಶಾಸಕರು ತಮ್ಮ ಕೆಲಸ ಕಾರ್ಯಗಳಿಗೆ, ಅಳಲು ತೋಡಿಕೊಳ್ಳಲು ಸಿದ್ದರಾಮಯ್ಯನ ಮೊರೆ ಹೋದರು ಎನ್ನಲಾಗುತ್ತಿದೆ. ಅಲ್ಲದೇ ಸಿದ್ದರಾಮಯ್ಯ ತಮ್ಮನ್ನು ನಂಬಿ ಬಂದ ಶಾಸಕರಿಗೆ ಆತ್ಮವಿಶ್ವಾಸ ಮೂಡಿಸುವ ಮೂಲಕ ಪಕ್ಷದ ನಾಯಕತ್ವವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಕಾರ್ಯವನ್ನು ಸದ್ದಿಲ್ಲದೆ ನಡೆಸಿದರು.

ಪರಂ ಪರದಾಟ
ಈ ಮಧ್ಯೆ, ಉಪ ಮುಖ್ಯಮಂತ್ರಿಯಾಗಿ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಲು ಪರಮೇಶ್ವರ್‌ ಪರದಾಡುತ್ತಿದ್ದಾರೆ.  ಪಕ್ಷ ಹಾಗೂ ಸರ್ಕಾರದಲ್ಲಿ ನಡೆಯುವ  ಬೆಳವಣಿಗೆಗಳು ನಡೆದರೂ ಅವರ ಗಮನಕ್ಕೆ ಬಾರದೇ ನಡೆಯುತ್ತಿರುವುದು ಕಂಗೆಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿದ್ದಾಗ  ಪರಮೇಶ್ವರ್‌ ಬೆಳಗಾವಿ ಜಿಲ್ಲಾ ನಾಯಕರ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದೇ ಇರುವುದಕ್ಕೆ ಪಕ್ಷದಲ್ಲಿ ದೊಡ್ಡ ಮಟ್ಟದ ಬಂಡಾಯ ಭುಗಿಲೇಳಲು ಕಾರಣವಾಯಿತು  ಎಂಬ ಆರೋಪ ಪಕ್ಷದ ವಲಯದಲ್ಲಿದೆ.

ಜಾರಕಿಹೊಳಿ ಸಹೋದರರ ಬಂಡಾಯ ಆರಂಭವಾದಾಗ ಸರ್ಕಾರದ ಪ್ರಮುಖರಾಗಿ ರಮೇಶ್‌ ಜಾರಕಿಹೊಳಿಯನ್ನು ಕರೆದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರೂ, ಇವರ ಮಾತಿಗೆ ಜಾರಕಿಹೊಳಿ ಬೆಲೆ ಕೊಡದೇ ಸಿದ್ದರಾಮಯ್ಯ ಬರುವವರೆಗೂ ತಮ್ಮ ಹಠ ಹಿಡಿಕೊಂಡು ಕುಳಿತರು.  ಈ ಎಲ್ಲ ಘಟನೆಗಳು ಪರಮೇಶ್ವರ್‌ ಪಕ್ಷದ ಶಾಸಕರ ಮೇಲೆ ಹಿಡಿತಹೊಂದಿಲ್ಲ ಎಂಬ ಸಂದೇಶ ರವಾನೆಯಾಗಲು ಕಾರಣವಾಗಿವೆ ಎಂದು ಹೇಳಲಾಗಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next