Advertisement

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ

02:09 PM Sep 29, 2024 | Team Udayavani |

ಹುಬ್ಬಳ್ಳಿ: ಎಫ್‌ಐಆರ್ ದಾಖಲಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ದಸರಾ ಉದ್ಘಾಟನೆ ಬಿಡಿ, ಯಾವುದೇ ಸರ್ಕಾರಿ ಪತ್ರ, ಆದೇಶಗಳಿಗೂ ಸಹಿ ಕೂಡ ಮಾಡಬಾರದು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

Advertisement

ಹುಬ್ಬಳ್ಳಿಯಲ್ಲಿ ಸೆ.29ರ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ತೀರ್ಪು ನೀಡಿದ ಮೇಲೆ ನಾವು ಯಾವತ್ತೂ ಕಾಂಗ್ರೆಸ್ ರೀತಿ ವರ್ತನೆ ಮಾಡಿಲ್ಲ. ದಸರಾ ಪವಿತ್ರ ಆಚರಣೆ. ದಸರಾ ಉದ್ಘಾಟನೆ ಅಲ್ಲ, ಸಿದ್ದರಾಮಯ್ಯ ಏನೂ ಮಾಡಬಾರದು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು ಎಂದು ಟೀಕಿಸಿದರು.

ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್, ಸಚಿವ ಕುಮಾರಸ್ವಾಮಿ ವಿರುದ್ಧ ಹಂದಿ ಪದ ಬಳಸಿ ಪತ್ರ ಬರೆದಿರುವುದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಗೌರವಯುತ ಪದ ಬಳಕೆ ಮಾಡುವುದು ಅಧಿಕಾರಿ ಕರ್ತವ್ಯ. ನಾನು ನೋಡಿದ ಹಾಗೆ ಸಚಿವ  ಕುಮಾರಸ್ವಾಮಿ ಏಕವಚನದಲ್ಲಿ ಮಾತಾಡಿಲ್ಲ. ಆದರೆ, ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಅಧಿಕಾರಿಯ ಅಹಂಕಾರದ ಪರಮಾವಧಿ. ಅವರು ಕುಮಾರಸ್ವಾಮಿ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇದನ್ನು ಯಾವ ಕಾಲಕ್ಕೂ ಒಪ್ಪಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಈ ಸರ್ಕಾರವೇ ಕಾಯಂ ಅಧಿಕಾರದಲ್ಲಿ ಇರುತ್ತದೆ ಎಂಬ ಭ್ರಮೆಯಲ್ಲಿ ಅಧಿಕಾರಿಗಳು ಇದ್ದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಎಡಿಜಿಪಿ ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಮಾಡಿರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಆಡಳಿತವೇ ಇಲ್ಲ. ಈ ಸರ್ಕಾರ ಯಾವುದಕ್ಕೂ ಸಹಕರಿಸುವುದಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next