ಪುತ್ತೂರು: ಕೋಮು ಗಲಭೆ ನಡೆಸುವವರಿಗೆ ಹಾಗೂ ಪ್ರಚೋದನೆ ನೀಡುವವರಿಗೆ ಕಠಿನ ಶಿಕ್ಷೆ ವಿಧಿಸಲು ಕಾನೂನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಕಿಲ್ಲೆ ಮೈದಾನದಲ್ಲಿ ರವಿವಾರ ನಡೆದ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ , ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಸುಶಿಕ್ಷಿತರ, ವಿದ್ಯಾವಂತರ ಜಿಲ್ಲೆ. ಇಂಥ ಜಿಲ್ಲೆಯಲ್ಲಿ ಕೋಮುವಾದಿ ರಾಜಕಾರಣಕ್ಕೆ ಅವಕಾಶ ನೀಡಬಾರದು. ಇದನ್ನು ರಾಜ್ಯ ಸರಕಾರವೂ ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುವುದು. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಅವರಿಗೆ ಶಿಕ್ಷೆ ಆಗಲೇಬೇಕು. ಆದರೆ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂದರು.
ಗೆದ್ದೇ ಗೆಲ್ಲುತ್ತೇವೆ: ಜಿಲ್ಲಾ ಬಂದ್ ಮಾಡುತ್ತೇವೆ, ಬೆಂಕಿ ಹಚ್ಚುತ್ತೇವೆ, ಮುಂದೆ ನಿಮ್ಮನ್ನು ನೋಡಿಕೊಳ್ತೀವಿ ಎಂದು ಹೇಳುತ್ತಿದ್ದಾರೆ. ಇಂತಹವರು ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು. ಇವರು ಗ್ರಾ.ಪಂ. ಸದಸ್ಯರಾಗಲೂ ನಾಲಾಯಕ್. ಇಂಥವರಿಗೆ ಮರ್ಯಾದೆ ಕೊಡಬೇಡಿ. ಈ ನಿಟ್ಟಿನಲ್ಲಿ ಕಾನೂನು ರೂಪಿಸಲು ಮುಂದಾಗಿದ್ದೇವೆ. ಅದೇ ಕಾರಣಕ್ಕಾಗಿ ನನ್ನ ಮೇಲೆ, ರಮಾನಾಥ ರೈ ಮೇಲೆ ಕೋಪ. ಇದನ್ನು ಸವಾಲಾಗಿ ಸ್ವೀಕರಿಸಿ, ಮುಂದಿನ ಬಾರಿ ಇಬ್ಬರೂ ಗೆಲ್ಲುತ್ತೇವೆ. ಮಾತ್ರವಲ್ಲ ದ.ಕ. ಜಿಲ್ಲೆಯ 8 ಸ್ಥಾನಗಳನ್ನೂ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಧರ್ಮ ಪಾಲನೆಗೆ ಸ್ವಾತಂತ್ರ್ಯ ಇದೆ. ಇನ್ನೊಂದು ಧರ್ಮದ ದ್ವೇಷ ಸಲ್ಲದು. ಧರ್ಮಪಾಲಕರಾಗಬೇಕು, ಆದರೆ ಧರ್ಮ ದ್ವೇಷಿಗಳಾಗಬಾರದು.
– ಸಿದ್ದರಾಮಯ್ಯ(ಬೆಳ್ತಂಗಡಿಯಲ್ಲಿ)