ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾ ದಳದಲ್ಲಿದ್ದು ಎಲ್ಲ ಬಗೆಯ ಅಧಿಕಾರ ಅನುಭವಿಸಿ, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಹೇಳಿದರು.
ತಾಲೂಕಿನ ಅಜ್ಜವಾರದಲ್ಲಿ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರ ಬದಲಿಗೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನವರು ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಳಿಕ ಕೋಲಾರಕ್ಕೆ ಹೋಗಿದ್ದಾರೆ ಎಂದು ಅಣಕಿಸಿದರು.
ಯಾರು, ಯಾರಿಗೆ ದುಡ್ಡು ಕೊಟ್ಟಿದ್ದರು?
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದಿಂದ ನಾವು ದುಡ್ಡು ಕೊಟ್ಟಿದ್ದೆವು ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಆರೋಪ ಮಾಡಿದ್ದಾರೆ. ಯಾರು, ಯಾರಿಗೆ ದುಡ್ಡು ಕೊಟ್ಟಿದ್ದರು ಎನ್ನುವುದನ್ನು ದಿ| ಅನಂತಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪ ಮಾತನಾಡಿಕೊಂಡಿದ್ದ ಲೀಕ್ಡ್ ವೀಡಿಯೋ ನೋಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಚಿವ ಸುಧಾಕರ್ ಮೊದಲು ನಾವು ಬಯಲು ಮಾಡಿದ ಸುಮಾರು ಐದು ಸಾವಿರ ಕೋಟಿ ರೂ. ಮೊತ್ತದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ದುಡ್ಡಿನ ಲಾಲಸೆಗಾಗಿ ಅಮಾಯಕ ಜನರ ಜತೆ ಚೆಲ್ಲಾಟ ನಡೆಸಿದವರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Related Articles
ನನ್ನ ವಿರುದ್ಧ 35 ಸಾವಿರ ಕೋಟಿ ರೂ.ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಬಿಡದೆ ಖಜಾನೆ ಲೂಟಿ ಮಾಡಿದವರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.