ಬೆಂಗಳೂರು: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಒಬ್ಬ ಮೂರ್ಖ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರು ಈಗ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರತ್ಯೇಕತೆ ಬಗ್ಗೆ ಮಾತನಾಡುವ ಸಚಿವ ಉಮೇಶ್ ಕತ್ತಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಇಡೀ ಉತ್ತರ ಕರ್ನಾಟಕಕ್ಕೆ ಏನ್ ಕೊಡುಗೆ ನೀಡಿದ್ದಾರೆ ಎಂಬುವುದನ್ನು ಜನತೆ ಮುಂದೆ ಹೇಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ಸಮಾಜವಾದಿ ವೇದಿಕೆ ಗಾಂಧಿಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಮಧು ಲಿಮಯೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ಉದ್ದೇಶಕ್ಕೆ ಅವರೆಲ್ಲ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರಾಗಿದ್ದು ಕೊಂಡು ಉಮೇಶ್ ಕತ್ತಿ ಕೂಡ ಪ್ರತೇಕ ರಾಜ್ಯ ಬೇಕು ಅಂತ ಹೇಳುತ್ತಿದ್ದಾರೆ. ಈ ಉಮೇಶ್ ಕತ್ತಿ ಮಂತ್ರಿಯಾಗಿದ್ದವನು ಇಷ್ಟು ವರ್ಷ ಏನ್ ಕಡಿದು ಗುಡ್ಡೆ ಹಾಕಿದ್ದಾರೆ. ಉತ್ತರ ಕರ್ನಾಟಕಕ್ಕೆ ಉಮೇಶ್ ಕತ್ತಿ ಏನೆಲ್ಲ ಕೊಡುಗೆ ನೀಡಿದ್ದಾರೆ. ಅದನ್ನು ಜನತೆ ಮುಂದೆ ಹೇಳಲಿ. ಕೇವಲ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಕರ್ನಾಟಕವನ್ನು ಒಡೆಯುವ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ಕೊಡುವ ಮುನ್ನ ಅವರು ಈ ನಾಡಿಗಾಗಿ ಹೋರಾಟ ನಡೆಸಿದವರ ಇತಿಹಾಸ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಸಾವರ್ಕರ್ ಬಗ್ಗೆ ಹೇಳಿಕೆಗೆ ಮೊಟ್ಟೆ ಎಸೆತ: ನಾನು ಸಾವರ್ಕರ್ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ನನ್ನ ಮೇಲೆ ಕೋಳಿ ಮೊಟ್ಟೆ ಎಸೆಯೋದಕ್ಕೆ ಆರಂಭಿಸಿದ್ದಾರೆ. ನಾನು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೋಮುಗಲಭೆ ಆಗುತ್ತೆ ಅನ್ನೋ ಕಾರಣದಿಂದಾಗಿ ಶಿವಮೊಗ್ಗ ಮುಸ್ಲಿಮರ ಪ್ರದೇಶದಲ್ಲಿ ಸಾವರ್ಕರ್ ಪೋಟೋ ಹಾಕಬೇಡಿ ಎಂದು ಹೇಳಿದ್ದೆ. ಅಷ್ಟಕ್ಕೆ, ಬಿಜೆಪಿಯವರು ಇದೇನು ಪಾಕಿಸ್ತಾನನಾ? ಯಾಕೆ ಸಾವರ್ಕರ್ ಪೋಟೋ ಹಾಕಬಾರದು ಎಂದು ಹೇಳಿದರು ಎಂದರು.
ಕಳೆದ 50 ವರ್ಷಗಳಿಂದ ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲಿಲ್ಲ. ಇಂತಹವರಿಂದ ನಾವು ಇವತ್ತು ರಾಷ್ಟ್ರಭಕ್ತಿ ಕಲಿಯಬೇಕಾ? ಈ ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಪೋಟೋ ಸರ್ಕಾರಿ ಜಾಹೀರಾತಿನಲ್ಲಿ ಕೈ ಬಿಟ್ಟರು. ಇತಿಹಾಸ ತಿರುಚುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ ಎಂದು ದೂರಿದರು. ಸಮಾಜವಾದಿ ಹಿನ್ನೆಲೆಯುಳ್ಳ ಗೋಪಾಲಗೌಡರರಿಂದ ಯುವಕರು ಪ್ರರಣೆ ಪಡೆದುಕೊಳ್ಳಬೇಕು. ಯುವ ಶಾಸಕರು ಗೋಪಾಲ ಗೌಡರ ಸದನದಲ್ಲಿ ಹೇಗಿರುತ್ತಿದದ್ರು ಎಂಬುವುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಟ್ಟೆ ಎಸೆದವನು ಆರ್‌ಎಸ್‌ಎಸ್ ಗಿರಾಕಿ
ಮಡಿಕೇರಿಯಲ್ಲಿ ನನ್ನ ಕಾರ್ ಮೇಲೆ ಮೊಟ್ಟೆ ಎಸೆದವನು ಆರ್‌ಎಸ್ ಎಸ್ ಗಿರಾಕಿ. ಇದೀಗ ಅವನು ನಾನು, ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾನೆ. ಜೆಡಿಎಸ್‌ನಲ್ಲಿ ಕೂಡ ನಾನು ಇದ್ದೆ ಎಂದಿದ್ದಾನೆ. ಬಿಜೆಪಿಯವರು ಆತನ ಮೂಲಕ ಬರೀ ಸುಳ್ಳು ಹೇಳಿಸುತ್ತಿದ್ದಾರೆ. ಸತ್ಯವನ್ನು ತಿರುಚಿ ಹೇಳುವುದು ಬಿಜೆಪಿಯವರ ಕೆಲಸವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕನ ಅಪ್ಪಚ್ಚು ರಂಜನ್ ಜತೆ ಆ ಯುವಕನ ಫೋಟೊ ಇದೆ. ಆ ಫೋಟೋ ಬಗ್ಗೆ ಶಾಸಕರಿಗೆ ಕೇಳಿದರೆ ಆತ ನನ್ನ ಜತೆ ಫೋಟೋ ತೆಗಿಸಿಕೊಂಡಿದ್ದಾನೆ ಅಷ್ಟೇ ಎನ್ನುತ್ತಿದ್ದಾರೆ. ಇದು ಬರೀ ಸುಳ್ಳು ಅಲ್ವಾ, ನಾವೆಲ್ಲರೂ ಮೊದಲು ಮನುಷ್ಯರಾಗಿ ಬದುಕಬೇಕು. ಆ ಮೇಲೆ ಜಾತಿ. ಕುವೆಂಪು ಕೂಡ ಇದನ್ನೇ ಹೇಳಿದ್ದಾರೆ ಎಂದರು.