ಬೆಂಗಳೂರು: ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ಕೂಡಲೇ ಆ ಕುರಿತು ಗಮನ ಹರಿಸಬೇಕು ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಸಿದ್ದರಾಮಯ್ಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಏಷ್ಯಾದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದರು. ಹೀಗಾಗಿ ಇಲ್ಲಿಯ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಲು ಬಂದಿದ್ದೆ. ಎರಡು ಸಾವಿರಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯ ಸಿಬ್ಬಂದಿ ನೇಮಕವಾಗಬೇಕು. ಇನ್ನೂ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದೆ. ಶುಕ್ರವಾರದಿಂದ ಸೋಂಕಿತರ ದಾಖಲಾತಿ ಆರಂಭವಾಗುತ್ತದೆ. ವೈದ್ಯರೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಹಾಸಿಗೆ, ದಿಂಬು, ಬೆಡ್‍ಶೀಟ್ ಒದಗಿಸುವ ಗುತ್ತಿಗೆದಾರರ ಸಮಸ್ಯೆಯೇ ಇನ್ನೂ ಇತ್ಯರ್ಥವಾಗಿಲ್ಲ. 800 ರೂ. ಪ್ರಕಾರ ಬಾಡಿಗೆಗೆ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕವಾಗಿ ಟೀಕೆಗಳು ಬಂದ ಬಳಿಕ ಈಗ ಸರ್ಕಾರವೇ ಖರೀದಿ ಮಾಡುತ್ತಿದೆ. ಅದೂ ಇತ್ಯರ್ಥವಾಗಿಲ್ಲ. ಬಾಡಿಗೆಯೋ, ಖರೀದಿಯೋ ಎಂಬುದು ಮೊದಲು ಇತ್ಯರ್ಥವಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರದಲ್ಲಿ ಶೌಚಾಲಯಗಳು ದೂರ ಇವೆ. ವಯಸ್ಸಾದವರು ಹೋಗಿ ಬರಲು ಕಷ್ಟ. ಒಳಚರಂಡಿ ವ್ಯವಸ್ಥೆ ಸಹ ಸರಿಯಾಗಿಲ್ಲ. ತಾತ್ಕಾಲಿಕ ವ್ಯವಸ್ಥೆಯೇನೋ ಮಾಡಿದ್ದಾರೆ. ಸರ್ಕಾರ ಉದಾಸೀನ ತೋರಿಸಿರುವುದು ಸ್ಪಷ್ಟವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳದೇ ಹೋಗಿದ್ದು ಸರ್ಕಾರದ ತಪ್ಪು. ಸೋಂಕು ನಿಯಂತ್ರಣಕ್ಕೆ ಮತ್ತು ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಎರಡೂ ಸರ್ಕಾರಗಳು ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದರು.
ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪ್ರತಿಪಕ್ಷಗಳು ಸಲಹೆ ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಧಾನ ಮಂಡಲ ಅಧಿವೇಶನ ಕರೆಯುವುದಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಬಿಬಿಎಂಪಿ ಸದಸ್ಯ ಶಿವರಾಜ್ ಅವರು ಹಾಜರಿದ್ದರು.