ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಸಿದ್ದರಾಮಯ್ಯ ಅವರ ಆಕ್ರೋಶದ ಟ್ವೀಟ್ ಗಳು
ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು ‘ತುಮ್ ಖಾವೋ, ಮುಜೆ ಬಿ ಖಿಲಾವೋ’ ( ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ ನರೇಂದ್ರ ಮೋದಿ ಅವರೇ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯ ವರೆಗೆ ಲಂಚದ ಹಣದಲ್ಲಿ ಪಾಲು ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ?
Related Articles
ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ಕರ್ನಾಟಕದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್‌ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ ನರೇಂದ್ರ ಮೋದಿ ಜೀ?
ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿದ್ದಕ್ಕಾಗಿ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ ನರೇಂದ್ರ ಮೋದಿ ಜೀ?
ಕಳೆದ ಬಾರಿಯ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40% ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ ನರೇಂದ್ರ ಮೋದಿ ಜೀ?
ಸದನದಲ್ಲಿ * ಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು ಬಿಜೆಪಿ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ, ಇದು ನರೇಂದ್ರ ಮೋದಿ ಕಾಲವೇ?
ಬಿಜೆಪಿ ಇದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲಾ? ಈಗ್ಯಾಕೆ ಹೀಗೆ ನರೇಂದ್ರ ಮೋದಿ ಜೀ?
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮೆರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಿಲ್ಲವೇ ನರೇಂದ್ರ ಮೋದಿ ಜೀ?
ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ ನರೇಂದ್ರ ಮೋದಿ ಅವರೇ?
ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಚ್ಚುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ?