Advertisement

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ

06:48 AM May 01, 2019 | Team Udayavani |

ಬೆಂಗಳೂರು: ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ಆದರೆ ಅವರು ನಾಳೆಯೇ ಮುಖ್ಯಮಂತ್ರಿಯಾಗುತ್ತೇವೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಮುಂದಿನ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗುವುದಾಗಿ ಹೇಳಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಸಚಿವ ಬಿ.ಜಡ್‌. ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತಿದ್ದೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರಬೇಕು ಎಂದು ಜನ ಕೂಡ ಹೇಳುತ್ತಿದ್ದಾರೆ. ಹಾಗಾಗಿ ಅವರು ಮುಂದಿನ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ, ಈ ಅವಧಿಯಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ತಿಳಿಸಿದರು.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್‌ ರಕ್ತ. ಸಚಿವ ಸ್ಥಾನದಿಂದ ಕೈಬಿಟ್ಟಾಗ ಅಸಮಾಧಾನ ಉಂಟಾಗುವುದು ಸಹಜ. ಹಾಗೆಂದು ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗುವುದಿಲ್ಲ. ಕೋಪದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರಷ್ಟೆ. ಜಾರಕಿಹೊಳಿ ಸಹೋದರರ ನಡುವೆ ಯಾವುದೇ ಭಿನ್ನಮತವಿಲ್ಲ. ಸಹೋದರರ ನಡುವೆ ಪ್ರೀತಿ ಜಾಸ್ತಿ ಇದೆ ಎಂದು ಹೇಳಿದರು.

ಆಪರೇಷನ್‌ ಕಮಲ ವಿಚಾರ ಕುರಿತು ಮತ್ತೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್‌ ಅಹಮ್ಮದ್‌ ಖಾನ್‌, ನಾವೆಲ್ಲಾ ರಾತ್ರಿ ಹೊತ್ತು ಕನಸು ಕಾಣುತ್ತೇವೆ. ಆದರೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಪಾಪ, ಯಡಿಯೂರಪ್ಪ ಅವರು ಮಧ್ಯರಾತ್ರಿ ಎದ್ದು ನಾನು ಮುಖ್ಯಮಂತ್ರಿಯಾದೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಚೆಲುವರಾಯಸ್ವಾಮಿ ಕೆಲಸ ಮಾಡಿಲ್ಲ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ, ಚೆಲುವರಾಯಸ್ವಾಮಿಯವರು ಸುಮಲತಾ ಪರ ಪ್ರಚಾರ ಮಾಡಿದ್ದಾರಾ, ಎಂದು ಪ್ರಶ್ನಿಸಿ, ಅವರು ಈ ಚುನಾವಣೆಯಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತಿದ್ದರು ಅಷ್ಟೇ ಎಂದರು.

Advertisement

ಮಂಡ್ಯ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಈ ಬಾರಿಯೂ ಅದೇ ರೀತಿ ಮಾಡಬೇಕಿತ್ತು. ಚೆಲುವರಾಯಸ್ವಾಮಿ ಸೇರಿದಂತೆ ಎಲ್ಲರ ಜತೆ ಮಾತನಾಡಿದ್ದರೆ ಸರಿ ಹೋಗುತ್ತಿತ್ತು. ಆದರೆ, ಆಗಲಿಲ್ಲ.

ಕುಮಾರಸ್ವಾಮಿಯವರು ತಮ್ಮ ಜೊತೆ ಮೂಲ ಕಾಂಗ್ರೆಸ್‌ನವರು ಇದ್ದಾರೆ. ಬೆನ್ನಿಗೆ ಚೂರಿ ಹಾಕಿದವರು ಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಸಹಜವಾಗಿಯೇ ಚೆಲುವರಾಯಸ್ವಾಮಿಯವರಿಗೆ ಬೇಸರ ಮೂಡಿಸಿತ್ತು. ಅದೇ ಕಾರಣಕ್ಕೆ ಅವರು ಪ್ರಚಾರಕ್ಕೆ ಬರಲಿಲ್ಲ. ಹಾಗೆಂದು ಸುಮಲತಾ ಅವರ ಪರವಾಗಿಯೂ ಚೆಲುವರಾಯಸ್ವಾಮಿ ಪ್ರಚಾರ ಮಾಡಿಲ್ಲ ಎಂದು ಹೇಳಿದರು.

ಈಗಾಗಲೇ ಮಂಡ್ಯದಲ್ಲಿ ನಿಖಿಲ್‌ ಗೆದ್ದಾಗಿದೆ. ಒಂದೂವರೆ ಲಕ್ಷ ಲೀಡ್‌ನ‌ಲ್ಲಿ ಗೆಲ್ಲುತ್ತಾರೆ. ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಗೆಲ್ಲುವುದು ಖಚಿತ. ರಾಜ್ಯದಲ್ಲಿ ಕನಿಷ್ಠ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next