Advertisement

ಸಿದ್ದರಾಮಯ್ಯ ತರಾಟೆ; ಗೃಹಸಚಿವರನ್ನು ಭೇಟಿಯಾದ ಕೋಟ

11:27 PM Dec 31, 2021 | Team Udayavani |

ಕೋಟ: ಡಿ.ಜೆ.ಗೆ ಸಂಬಂಧಿಸಿದಂತೆ ಕೋಟ ಬಾರಿಕೆರೆಯ ಚಿಟ್ಟಿಕಟ್ಟೆಯ ಮೆಹಂದಿ ಮನೆಯಲ್ಲಿ ಲಾಠಿ ಚಾರ್ಜ್‌ ನಡೆಸಿದ ಘಟನೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರಕಾರ ಮತ್ತು ಸಚಿವ ಕೋಟ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿದ್ದು, ಕೋಟತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಹಾಗೂ ಕೊರಗ ಸಮುದಾಯದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಎಂದಿದ್ದಾರೆ.

ಸ್ಥಳೀಯ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೌನವನ್ನು ಕೊರಗರ ಮೇಲಿನ ಪೊಲೀಸ್‌ ದೌರ್ಜನ್ಯಕ್ಕೆ ಮೌನಸಮ್ಮತಿ ಎಂದು ಅರ್ಥೈಸೋಣವೇ? ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರನ್ನು ಭೇಟಿಯಾದ ಕೋಟ
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗುರುವಾರ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅನಂತರ ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಹೇಳಿಕೆಯನ್ನು ನೀಡಿ, ಗೃಹಸಚಿವರಿಗೆ ನಡೆದ ಘಟನೆಗಳನ್ನು ವಿವರಿಸಿದ್ದೇನೆ. ದಲಿತರಿಗೆ ಸಮಸ್ಯೆಯಾಗದಂತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದು, ತತ್‌ಕ್ಷಣ ಪ್ರತಿಕ್ರಿಯಿಸಿರುವ ಗೃಹಸಚಿವರು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕರೆ ಮಾಡಿದ್ದು, ದಲಿತರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಮುಂದುವರಿಯಬಾರದು, ಘಟನೆ ತಿರುವು ಪಡೆಯಲು ಕಾರಣರಾದವರ ಬಗ್ಗೆ ಕೂಡಲೇ ತನಿಖೆ ನಡೆಸಿ ಮಾಹಿತಿ ಒದಗಿಸಲು ಸೂಚಿಸಿದ್ದಾರೆ ಹಾಗೂ ಎಸ್‌.ಪಿ. ಯವರು ಪುನಃ ದಲಿತರ ಕೇರಿಗೆ ಭೇಟಿ ನೀಡಿ ಅವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿ ಬರಬೇಕೆಂದು ಆದೇಶಿಸಿದ್ದಾರೆ ಎಂದು ಕೋಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಶೀಘ್ರ ಬಿಜೆಪಿ, ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರ್ಪಡೆ: ಸತೀಶ ಜಾರಕಿಹೊಳಿ

Advertisement

ಮತ್ತೆ ಕೊರಗ ಕುಟುಂಬಕ್ಕೆ ಧೈರ್ಯ ತುಂಬಿದ ಎಸ್‌.ಪಿ.
ಗೃಹಸಚಿವರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಅವರು ಶುಕ್ರವಾರ ರಾತ್ರಿ ಕೋಟ ಬಾರಿಕೆರೆಯ ಕೊರಗ ಕಾಲನಿಗೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಮಂಜುನಾಥ ಭಂಡಾರಿ ಭೇಟಿ
ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಶುಕ್ರವಾರ ಕಾಲನಿಗೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಇಂದು ಪ್ರತಿಭಟನೆಗೆ ಕರೆ
ಜ. 1ರಂದು ಅಪರಾಹ್ನ 3 ಗಂಟೆಗೆ ಕೊರಗ ಕಾಲನಿಯಿಂದ ಕೋಟ ಪೊಲೀಸ್‌ ಠಾಣೆ ತನಕ ಕಾಲ್ನಡಿಗೆ ಜಾಥ ಹಾಗೂ ಠಾಣೆಯ ಎದುರು ಪ್ರತಿಭಟನೆ ರಾಷ್ಟ್ರೀಯ ಮಾನವಹಕ್ಕು ಸಮಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next