ಶಿವಮೊಗ್ಗ: ಈಶ್ವರಪ್ಪನಂತಹ ಕಡು ಭ್ರಷ್ಟ ಮತ್ಯಾರೂ ಇಲ್ಲ. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನಿಗೆ ಈಶ್ವರಪ್ಪ ಬಿಲ್ ಕೊಡಲಿಲ್ಲ. ಆತ ಆತ್ಮಹತ್ಯೆ ಮಾಡಿಕೊಂಡ. ಅವರದ್ದೇ ಪೊಲೀಸರಿಂದ ತನಿಖೆ ಮಾಡಿಸಿ, ಕೇಸ್ ಖುಲಾಸೆ ಮಾಡಿಸಿದ್ರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ನಗರದಲ್ಲಿ ಸೋಮವಾರ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಿ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ಪರೇಶ್ ಮೇಸ್ತಾ ಎಂಬ ಯುವಕ ಹೊನ್ನಾವರದಲ್ಲಿ ಸಹಜ ಸಾವಿಗೀಡಾದಾಗ ಅದು ಕೊಲೆ ಎಂದು ಹೇಳಿ ಇಡೀ ಕರಾವಳಿ ಜಿಲ್ಲೆಗಳಲ್ಲಿ ಹೋರಾಟ ಮಾಡಿ ಗೆಲ್ಲುವ ಪ್ರಯತ್ನ ಮಾಡಿದರು. ಆದರೆ ಸಿಬಿಐ ಬಿ ರಿಪೋರ್ಟ್ ಕೊಟ್ಟಿದೆ. ಈಶ್ವರಪ್ಪ ಪ್ರಕರಣದಲ್ಲಿ ಕೊಟ್ಟ ಬಿ ರಿಪೋರ್ಟ್ ಒಪ್ಪಿಕೊಳ್ಳುತ್ತಾರೆ. ಸಿಬಿಐ ವರದಿ ಒಪ್ಪಿಕೊಳ್ಳದೆ ಸಾಕ್ಷéನಾಶ ಆಗಿದೆ ಎಂದು ಹೇಳುವ ಈ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ಧಾಳಿ ನಡೆಸಿದರು.
ನರೇಂದ್ರ ಮೋದಿ ಅವರು ” ನಾ ಖಾವೂಂಗಾ..ನಾ ಖಾನೇ ದೂಂಗಾ..’ ಎಂದರು. ಗುತ್ತಿಗೆದಾರರ ಸಂಘದ ಕೆಂಪಣ್ಣ ಕೊಟ್ಟ ದೂರಿಗೆ ಈವರೆಗೆ ಕ್ರಮ ತೆಗೆದುಕೊಳ್ಳಲು ಆಗಿಲ್ಲ. ಭ್ರಷ್ಟರಿಗೆ ಮೋದಿ ರಕ್ಷಣೆ ಕೊಡುತ್ತಿದ್ದಾರೆ. ಐಟಿ-ಇಡಿಯವರು ಹುಡುಕಿ ಹುಡುಕಿ ದಾಳಿ ಮಾಡುತ್ತಿದ್ದಾರೆ. ಬಿಜೆಪಿಯವರು ಪ್ರಾಮಾಣಿಕರು, ಸತ್ಯ ಹರಿಶ್ಚಂದ್ರರಾ? ಹೋಟೆಲ್‌ಗಳಲ್ಲಿ ತಿಂಡಿಗಳ ಲಿಸ್ಟ್ ಹಾಕುವಂತೆ ಲಂಚದ ಪಟ್ಟಿ ಹಾಕಿದ್ದಾರೆ. ಇಂತಹ ಸರಕಾರಗಳು ಉಳಿಯಬೇಕಾ ಎಂದು ಪ್ರಶ್ನಿಸಿದರು.
10 ಕೆ.ಜಿ ಉಚಿತ ಅಕ್ಕಿ : ನಾನು ನಾಲ್ಕು ಕೋಟಿ ಜನರಿಗೆ ಉಚಿತ ಅಕ್ಕಿ ಕೊಡಲು ಪ್ರಾರಂಭಿಸಿದೆ. ಅದು ಕೇಂದ್ರ ಸರಕಾರದ ಅಕ್ಕಿ ಎಂದು ಹೇಳುತ್ತಾರೆ. ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನ್‌ಮೋಹನ್ ಸಿಂಗ್ ಸರಕಾರ. ವಾಜಪೇಯಿ, ಮೋದಿ ಸರಕಾರ ಅಲ್ಲ. ಬೊಮ್ಮಾಯಿಗೆ ಕೇಳ್ತಿನಿ.. ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶದಲ್ಲಿ ಉಚಿತ ಅಕ್ಕಿ ಏಕೆ ಕೊಡುತ್ತಿಲ್ಲ. ಏಳು ಕೆ.ಜಿ ಯಿಂದ ಐದು ಕೆಜಿಗೆ ಇಳಿಸಿದ ಇವರು ಬಡವರ ಪರವಾಗಿ ಇದ್ದಾರಾ..? ನಾನು ಮತ್ತೆ ಭರವಸೆ ಕೊಡ್ತೇನೆ. ಕಾಂಗ್ರೆಸ್ ಪಕ್ಷ ಅಧಿ ಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಉಚಿತ ಕೊಡ್ತೇನೆ ಎಂದು ಭರವಸೆ ನೀಡಿದರು.
ಶರಾವತಿ ನದಿಗೆ ಅಣೆಕಟ್ಟೆ ಕಟ್ಟಿದ್ದರಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ. 130 ಹಳ್ಳಿಗಳು ಮುಳುಗಡೆಯಾಗಿದ್ದವು. ಸಂತ್ರಸ್ತರಿಗೆ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು. ಆದರೆ ಈ ಪ್ರದೇಶವನ್ನು ಬಿಡುಗಡೆಗೊಳಿಸಿ ಡಿ ನೋಟಿಫಿಕೇಷನ್ ಮಾಡಿಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ