Advertisement

ಮಹಾ ಗಡಿ ವಿವಾದ; ವಿಪಕ್ಷಗಳ ನಾಯಕರನ್ನೂ ಸೇರಿಸಿ ಸಲಹಾ ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ

02:43 PM Nov 23, 2022 | Team Udayavani |

ಬೆಳಗಾವಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೀವು ಬರೆದಿರುವ ಪತ್ರ ತಲುಪಿದೆ. ಅತ್ಯಂತ ಮಹತ್ವಪೂರ್ಣವಾದ ಈ ವಿಷಯದ ಬಗ್ಗೆ ವಿಳಂಬವಾಗಿಯಾದರೂ ಕಾರ್ಯಪ್ರವರ್ತರಾಗಿರುವುದು ಸಂತೋಷ ಮತ್ತು ಸಮಾಧಾನದ ವಿಷಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Advertisement

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಅತೀವ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ನಾನು ಒಂದು ಪತ್ರಿಕಾ ಹೇಳಿಕೆ ನೀಡಿ ಕರ್ನಾಟಕ ಸರ್ಕಾರ ಕೂಡಾ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದ ಕಾರ್ಯತಂತ್ರವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಗಡಿವಿವಾದದ ಬಗ್ಗೆ ಸತತವಾಗಿ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆಯನ್ನು ಎದುರಿಸಲು ವಿರೋಧ ಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ಕೂಡಾ ರಚಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿ ಈಗಾಗಲೇ ಸಭೆ ನಡೆಸಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಗಡಿ ವ್ಯಾಜ್ಯ ವಿಚಾರಣೆಯ ಮೇಲುಸ್ತುವಾರಿಗಾಗಿ ಇಬ್ಬರು ಸಚಿವರ ಸಮಿತಿಯನ್ನು ಕೂಡಾ ಮಹಾರಾಷ್ಟ್ರ ಸರ್ಕಾರ ರಚಿಸಿದೆ. ಆದರೆ ಕರ್ನಾಟಕ ಸರ್ಕಾರ ಗಡಿವಿವಾದದ ಬಗ್ಗೆ ಮಹಾರಾಷ್ಟ್ರದಷ್ಟೇ ಮುತುವರ್ಜಿ ವಹಿಸಿಲ್ಲ ಎನ್ನುವುದು ವಿಷಾದನೀಯವಾದರೂ ವಾಸ್ತವವಾಗಿದೆ. ಇಂದು (ನವಂಬರ್ 23) ಸುಪ್ರೀಂ ಕೋರ್ಟ್ ಗಡಿ ವಿವಾದದ ಮೊಕದ್ದಮೆ ವಿಚಾರಣೆ ನಡೆಯಲಿದ್ದರೂ ಇಲ್ಲಿಯ ವರೆಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸುವ ಸೌಜನ್ಯವನ್ನೂ ತೋರದಿರುವುದು ವಿಷಾದನೀಯ. ಮುಖ್ಯಮಂತ್ರಿಗಳು ನಿನ್ನೆಯಷ್ಟೇ (ನ. 22) ನಮ್ಮ ವಕೀಲರ ಜೊತೆ ವಿಡಿಯೋ ಸಂವಾದ ನಡೆಸಲಿರುವುದು ರಾಜ್ಯ ಸರ್ಕಾರ ಈ ವಿಷಯವನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಬೇಕಿತ್ತೋ ಅಷ್ಟು ಗಂಭೀರವಾಗಿ ಸ್ವೀಕರಿಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ:ಬಿಜೆಪಿ v/s ಎಸ್ ಪಿ; ಗುಜರಾತ್ ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಿದು

Advertisement

ನಾನು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಗಡಿಭಾಗದ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರಿದೆ. ಇಷ್ಟು ಮಾತ್ರವಲ್ಲ ಗಡಿ ಸಂರಕ್ಷಣಾ ಸಮಿತಿ ಕೂಡಾ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರೀಯವಾಗಿದೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ರಚಿಸುವ ಜೊತೆಯಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸುವಂತೆ ಕನ್ನಡ ಸಂಘಟನೆಗಳ ಬೇಡಿಕೆಯನ್ನೂ ಕೂಡಾ ರಾಜ್ಯ ಸರ್ಕಾರ ಈಡೇರಿಸಿಲ್ಲ ಎಂದರು.

ಕೇಂದ್ರ ಸರ್ಕಾರವೇ ನೇಮಿಸಿರುವ ಮಹಾಜನ ಆಯೋಗದ ವರದಿಯೇ ಅಂತಿಮ, ಆಯೋಗದ ಶಿಫಾರಸಿಗೆ ಕರ್ನಾಟಕ ಬದ್ದವಾಗಿದ್ದು ಅದಕ್ಕಿಂತ ಹೊರತಾದ ಯಾವುದೇ ಬದಲಾವಣೆಯನ್ನು ಕರ್ನಾಟಕ ಒಪ್ಪುವುದಿಲ್ಲ ಎನ್ನುವುದು ಈವರೆಗಿನ ಎಲ್ಲ ರಾಜ್ಯ ಸರ್ಕಾರಗಳ ನಿಲುವಾಗಿದೆ. ಗಡಿ ವಿವಾದವನ್ನು ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ನ್ಯಾಯಾಲಯ ಅಲ್ಲ ಎನ್ನುವುದು ಕರ್ನಾಟಕ ಸರ್ಕಾರದ ನಿಲುವಾಗಿದೆ. ಕರ್ನಾಟಕಕ್ಕೆ ಸೇರಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋದ ದಿನದಿಂದ ಇದು ನಮ್ಮ ನಿಲುವಾಗಿದೆ. ಇಲ್ಲಿಯ ವರೆಗಿನ ಎಲ್ಲ ಸರ್ಕಾರಗಳು ಇದೇ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿದೆ ಎಂದು ಹೇಳಿದರು.

ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ದಾವೆ ಪುರಸ್ಕಾರ ಯೋಗ್ಯ ಅಲ್ಲ ಎಂದು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥವಾಗುವ ವರೆಗೆ ಸಾಕ್ಷಿದಾರರ ಪಾಟಿಸವಾಲು ದಾಖಲಾತಿ ನಡೆಸದಂತೆ ಸುಪ್ರೀಂಕೋರ್ಟಗೆ ಪುನರ್ ಪರಿಶೀಲನಾ ಅರ್ಜಿಯನ್ನೂ ಕೂಡಾಹಿಂದೆ  ರಾಜ್ಯ ಸರ್ಕಾರ ಸಲ್ಲಿಸಿತ್ತು. ಈ ನಿಲುವಿಗೆ ರಾಜ್ಯ ಸರ್ಕಾರ ಬದ್ದವಾಗಿರಬೇಕೆಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಆಗ್ರಹಿಸುತ್ತೇನೆ.

ನೆಲ-ಜಲ-ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ನ್ಯಾಯಬದ್ದವಾದ ಎಲ್ಲ ಕ್ರಮಗಳನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನ್ಯಾಯಬದ್ದವಾಗಿ ಕರ್ನಾಟಕಕ್ಕೆ ಸೇರಿರುವ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ನಮ್ಮ ನಿಲುವಾಗಬೇಕು. ನಾನು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿಯೇ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾದವನು. ಮುಖ್ಯ ಮಂತ್ರಿಯಾಗಿಯೂ ಸಮಸ್ತ ಕರ್ನಾಟಕದ ಹಿತಾಸಕ್ತಿಯ ಕಾವಲುಗಾರನ ಕೆಲಸ ಮಾಡಿದ್ದೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next