ಮೈಸೂರು: ಕಾಂಗ್ರೆಸ್ ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಬಸ್ ಸಿದ್ದವಾಗುತ್ತಿದೆ. ಕೋಲಾರಕ್ಕೆ ಹೋಗಿ ಟೆಸ್ಟ್ ರನ್ ಆಗಿದೆ. ನಾನೊಂದು ಟೀಂ, ಡಿ.ಕೆ ಶಿವಕುಮಾರ್ ಒಂದು ಟೀಂ ಆಗಿ ಪ್ರಚಾರ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಜೋತಿಷ್ಯ ನೋಡುವುದಿಲ್ಲ. ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲಾ ಏನು ಸತ್ತು ಹೋಗ್ತಾರಾ? ನಮಗೆ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ಯಾವುದು ಇಲ್ಲ. ಎಲ್ಲಾ ಒಳ್ಳೆಯ ಕಾಲವೇ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡುತ್ತೇವೆ ಎಂದರು.
ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಯಾರನ್ನೂ ಬಲವಂತವಾಗಿ ಮತಾಂತರ ಮಾಡಕೂಡದು. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ಸುಪ್ರೀಂ ಕೋರ್ಟ್ ಆದೇಶದ ಪರ ನಾವಿದ್ದೇವೆ ಎಂದರು.
ಇದನ್ನೂ ಓದಿ:ಮೊರ್ಬಿ ಸೇತುವೆ ದುರಂತ- ಜಾಣತನ ಪ್ರದರ್ಶಿಸಬೇಡಿ;ಅಧಿಕಾರಿಗಳಿಗೆ ಗುಜರಾತ್ ಹೈಕೋರ್ಟ್ ತರಾಟೆ
ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಗುಂಬಜ್ ಒಡೆದು ಹಾಕುತ್ತೇನೆ ಎನ್ನಲು ಪ್ರತಾಪ ಸಿಂಹ ಯಾರು? ಸಂಸದನಾಗಿ ಕಾಮನ್ ಸೆನ್ಸ್ ಬೇಡವೇ? ಅವರೇನು ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದರು. ಈಗ ನಾನೇ ಒಡೆಯುತ್ತೇನೆಂದರೆ ಅರ್ಥ ಏನು? 600 ವರ್ಷಗಳ ಹಿಂದೆಯೇ ಮೊಘಲರು ನಮ್ಮ ದೇಶವನ್ನು ಆಳುವಾಗ ಇವರೆಲ್ಲಾ ಏನು ಮಾಡುತ್ತಿದ್ರು.? ಅಶಾಂತಿ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚುನಾವಣೆ ಸಂದರ್ಭದಲ್ಲಿ ಮತಗಳ ಕ್ರೂಡಿಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹೀಗೆ ಇರಬೇಕು ಎಂಬ ರೂಲ್ಸ್ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್ ಇದು ಗುಂಬಜ್ ರೀತಿ ಇರುವುದನೆಲ್ಲ ಒಡೆದು ಬಿಡುತ್ತೀರಾ? ಬಿಜೆಪಿಯ ಈ ತಂತ್ರ ವರ್ಕ್ ಆಗುವುದಿಲ್ಲ. ಕರ್ನಾಟಕ ಮತ್ತು ಈ ದೇಶದ ಜನರು ಜಾತ್ಯತೀತರು. ಜಾತಿ ಧರ್ಮದ ವಿಚಾರವನ್ನು ಜನರು ಒಪ್ಪುವುದಿಲ್ಲಾ ಎಂದು ಸಿದ್ದರಾಮಯ್ಯ ಹೇಳಿದರು.