Advertisement
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದ ಮುದ್ರಣವನ್ನು ತಕ್ಷಣ ತಡೆಹಿಡಿದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಚಿಂತಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Related Articles
Advertisement
ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೀಡಿರುವ ಕರಡನ್ನು ತಕ್ಷಣ ವಾಪಸು ಪಡೆದು ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಮತ್ತು ನಾಡಿನ ಚಿಂತಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಅದಕ್ಕೆ ಇರುವ ಪಾವಿತ್ರ್ಯವನ್ನು ಹಾಳುಗೆಡಹಿದ ಬಿಜೆಪಿ ಈಗ ಎಳೆಯ ಮಕ್ಕಳ ಬುದ್ದಿಕೆಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ. ನಾಡಿನ ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದನಿ ಎತ್ತಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಪಕ್ಷಗಳಿಗೆ ತಮಗೆ ಸರಿಕಂಡ ವ್ಯಕ್ತಿಗಳನ್ನು ಆರಾಧಿಸುವ, ಅವರ ಚಿಂತನೆಗಳನ್ನು ಪ್ರಚಾರಮಾಡುವ ಅಧಿಕಾರವಿದೆ, ಆದರೆ ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥ ರಾಜಕೀಯದ ರಾಡಿಯಿಂದ ಮಲಿನಗೊಳಿಸ ಬಾರದು. ಬುದ್ದ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಜಾತಿ,ಧರ್ಮ, ಪಕ್ಷ, ಪಂಥಗಳನ್ನು ಮೀರಿದ ಚೇತನಗಳು. ಇವರನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ರಾಜಕೀಯ ದುರುದ್ದೇಶದಿಂದ ಮಾಡುವ ಈ ರೀತಿಯ ಅವಮಾನವನ್ನು ಸಹಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.