Advertisement

ಇಬ್ರಾಹಿಂಗೆ ಮಾನ- ಮರ್ಯಾದೆ ಏನೂ ಇಲ್ಲ. ಜೆಡಿಎಸ್ ನಲ್ಲಿ ಸ್ವಾತಂತ್ರ್ಯವಿಲ್ಲ: ಸಿದ್ದರಾಮಯ್ಯ

11:48 AM Jun 06, 2022 | Team Udayavani |

ಮೈಸೂರು: ತಮ್ಮ ವಿರುದ್ಧ ಟೀಕೆಗಳ ಸುರಿಮಳೆಗರೆಯುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಬ್ರಾಹಿಂ ಆ ಪಕ್ಷದಲ್ಲಿ ನಾಮಕೇವಾಸ್ತೆ ಅಧ್ಯಕ್ಷ ಎಂದು ಟೀಕಿಸಿದ್ದಾರೆ.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಇಬ್ರಾಹಿಂಗೆ ಮಾನ- ಮರ್ಯಾದೆ ಏನೂ ಇಲ್ಲ. ಅವರಿಗೆ ಜೆಡಿಎಸ್ ನಲ್ಲಿ ಸ್ವಾತಂತ್ರ್ಯ ಇಲ್ಲ. ಅವರೊಬ್ಬ ನಾಮಕೇವಾಸ್ತೆ ಅಧ್ಯಕ್ಷ. ಕೂತ್ಕೋ ಅಂದರೆ ಕೂತ್ಕೋಬೇಕು. ನಿಂತುಕೋ ಅಂದರೆ ನಿಂತುಕೊಳ್ಳಬೇಕು. ಜೆಡಿಎಸ್ ನವರು ಇಬ್ರಾಹಿಂಗೆ ಏನು ಮಾಡಿದ್ದಾರೆ? ವಿಧಾನ ಪರಿಷತ್ತಿಗೆ ಕಳುಹಿಸಿದ್ದಾರಾ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆಂದು ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದರು.

ನಾವು ಅನೇಕ ಬಾರಿ ಜೆಡಿಎಸ್ ಗೆ ನೆರವಾಗಿಲ್ಲವೇ? ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ಲವೇ? ಮೂವತ್ತೇಳು ಸ್ಥಾನ ಇದ್ದ ಜೆಡಿಎಸ್ ಗೆ ನಾವು ಸಿಎಂ ಸ್ಥಾನ ಕೊಡಲಿಲ್ಲವೇ? ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಗೆ ಸಹಕಾರ ಕೊಟ್ಟಿದ್ದೇವೆ. ಪ್ರತಿ ಬಾರಿಯೂ ಜೆಡಿಎಸ್ ಏಕೆ ಗೆಲ್ಲಬೇಕು? ನಮಗೂ ಸಂಖ್ಯಾಬಲ ಇದೆ. ಈ ಬಾರಿಯ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದು ಅಭಿಪ್ರಾಯಪಟ್ಟರು.

ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್ ಗೆ ಬರುತ್ತವೆ. ಅದು ಹೇಗೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನಾವು ನಮ್ಮ ಕಾರ್ಯತಂತ್ರ ನಡೆಸುತ್ತೇವೆ ಎಂದು ಹೇಳಿದರು.

ಬರಗೂರು ಪರಿಷ್ಕರಣೆ ಜಾರಿಯಾಗಲಿ: ಪಠ್ಯಪುಸ್ತಕ ವಿವಾದ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಮಿತಿ ವಿಸರ್ಜನೆ ಮಾಡುವುದಲ್ಲ, ಪರಿಷ್ಕರಣೆಯನ್ನೇ ರದ್ದು ಮಾಡಿ, ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕರಣೆಯೇ ಜಾರಿಯಾಗಲಿ. ಹಿಂದೂಗಳ ಭಾವನೆಗೆ ಧಕ್ಕೆಯಾಗುವ ಕೆಲಸ ಮಾಡಿದ್ದಾರೆ. ಕವಿಗಳ, ಮಹಾತ್ಮರ ಕೃತಿಚೌರ್ಯ ನಡೆದಿವೆ. ನಾನು ಹಿಂದೂ ಅಲ್ವಾ? ಅಂಬೇಡ್ಕರ್ ಹಿಂದೂ ಅಲ್ವಾ? ಎಲ್ಲರಿಗೂ ಅವಮಾನ ಆಗಿದೆ ಎಂದರು.

Advertisement

ಇದನ್ನೂ ಓದಿ:ಈ ಬಾರಿಯ ರಾಜ್ಯಸಭೆ ಚುನಾವಣೆ ಬೇರೆಯದೇ ರೀತಿ ನಡೆಯಬಹುದು: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯಗೆ ಏನು ಗೊತ್ತು ಆರ್ಥಿಕತೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೌದು. ನಾನು ಆರ್ಥಿಕ ತಜ್ಞ ಅಲ್ಲ‌‌. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡಿರುವ ವಕೀಲ. ಹೈಕೋರ್ಟ್ ಸುಪ್ರೀಂಕೋರ್ಟ್ ನಲ್ಲೂ ಪ್ರಾಕ್ಟಿಸ್ ಮಾಡಿಲ್ಲ. ಆದರೆ ನಾನು ಆರ್ಥಿಕತೆ ಬಗ್ಗೆ ಮಾತನಾಡಿರುವುದು ತಪ್ಪು, ಸರಿ ಎಂದು ಹೇಳಲು ಪ್ರತಾಪ್ ಸಿಂಹ ಆರ್ಥಿಕ ತಜ್ಞನಾ? ಯಡಿಯೂರಪ್ಪ, ಬೊಮ್ಮಾಯಿ ಆರ್ಥಿಕ ತಜ್ಞರೆ? ನಾನು ವಕೀಲ ಪದವಿ ಓದಿದ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ? ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ‌‌? ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಮೀ ಹೆದ್ದಾರಿ ಬರುತ್ತದೆ? ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆಂಬ ಬಗ್ಗೆ ಚರ್ಚೆಗೆ ಬರಲಿ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ ಎಂದರು.

ಜೆಡಿಎಸ್‌ನಿಂದ ದಲಿತ, ಖರ್ಗೆ ಅಸ್ತ್ರ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದಲಿತರಿಗೆ ನಾವು ಏನು ಮಾಡಿದ್ದೀವೆಂದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ದಲಿತರಿಗೆ. ದಲಿತರಿಗೆ ಕಾಂಗ್ರೆಸ್‌ನಲ್ಲಿ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಜೆಡಿಎಸ್‌ನವರಿಂದ ಹೇಳಿಸಿಕೊಳ್ಳಬೇಕೆನು ಎಂದು  ದಳಪತಿಗಳ ವಿರುದ್ದ ಪ್ರತಿಪಕ್ಷ ನಾಯಕ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next