ಶಿವಮೊಗ್ಗ: ಅವನ್ಯಾವನೋ ಒಬ್ಬ ಸುನೀಲನ ಜೊತೆ ಸೂರ್ಯ, ಮೋಹನ್ ಅವರೆಲ್ಲಾ ಹೋಗಿದ್ದಾರೆ. ಡಕಾಯಿತಿ, ಕೊಲೆ ಪ್ರಕರಣದಲ್ಲಿದ್ದವನ ಜೊತೆ ಬಿಜೆಪಿ ಮುಖಂಡರೆಲ್ಲಾ ಸೇರಿಕೊಂಡಿದ್ದರು. ಇವರು ನೀತಿ ಹೇಳುವುದು ಬದನೆಕಾಯಿ ತಿನ್ನೋಕಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು ಸುನೀಲನನ್ನು ಹುಡುಕುತ್ತಿದ್ದಾರೆ. ಅವನು ಬಿಜೆಪಿ ಮುಖಂಡರ ಜೊತೆಗೆ ಇದ್ದ. ಆಡಳಿತರೂಢ ಬಿಜೆಪಿ ಶಾಸಕರು, ಸಂಸದರು ಅವರ ಜೊತೆಗಿದ್ದರೆ ಪೊಲೀಸ್ ಹೇಗೆ ಬಂಧಿಸುತ್ತಾರೆ? ಅವರಿಗೆ ಹೇಗೆ ಧೈರ್ಯ ಬರುತ್ತದೆ? ಕಾನೂನು ಕ್ರಮ ಕೈಗೊಂಡು ಶಿಕ್ಷೆ ಕೊಡಿಸಲು ಸಾಧ್ಯವೇ ಎಂದರು.
ಬಿಜೆಪಿಯವರು ಹೇಳೋದೊಂದು ಮಾಡುವುದೊಂದು. ನಲಪಾಡ್ ಮೇಲೆ ಒಂದು ಕೇಸ್ ಇದೆ. ಆದರೇ, ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ? ಅಮಿತ್ ಶಾ ಕೊಲೆ ಕೇಸ್ ನಲ್ಲಿದ್ದರು. ಗಡಿಪಾರು ಆದೇಶದಲ್ಲಿದ್ದರು. ಬಿಜೆಪಿಗೆ ಏನು ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿದ್ದರಾಮಯ್ಯ ಲೈಫ್ ಜರ್ನಿ ಸಿನಿಮಾ ವಿಚಾರವಾಗಿ ಮಾತನಾಡಿದ ಅವರು, ‘’ಗೊತ್ತಿಲ್ಲಪ್ಪಾ. ಅವರು ಕನಕಗಿರಿ ಕ್ಷೇತ್ರದಿಂದ ಬಂದಿದ್ದರು. ಅವರು ಸಿನಿಮಾ ಮಾಡುವುದಾಗಿ ಹೇಳಿದ್ದಾರಷ್ಟೆ. ಬೇರೆ ಏನೂ ಗೊತ್ತಿಲ್ಲ. ನಾನು ಆಕ್ಟಿಂಗ್ ಮಾಡಲ್ಲ. ನನಗೆ ಆಕ್ಟಿಂಗ್ ಬರುವುದಿಲ್ಲ ಎಂದರು.
Related Articles
ಚುನಾವಣೆ ಸ್ಫರ್ಧೆಗೆ ಬೇರೆ ಕ್ಷೇತ್ರಗಳಿಂದ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರೆಯುತ್ತಿದ್ದಾರೆ. ನಾನೂ ಅರ್ಜಿ ಹಾಕಿದ್ದೇನೆ. ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರೇ ಹೇಳಿದ ಜಾಗದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಕೇಂದ್ರ V/s ಸುಪ್ರೀಂಕೋರ್ಟ್: ಕೊಲಿಜಿಯಂ ಶಿಫಾರಸು ಮಾಡಿದ ಸೌರಭ್ ಹೆಸರನ್ನು ತಿರಸ್ಕರಿಸಿದ್ದೇಕೆ?
ಒಂದೇ ಕ್ಷೇತ್ರಕ್ಕೆ ಹಲವು ಜನರಿಂದ ಅರ್ಜಿ ವಿಚಾರವಾಗಿ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವುನ್ನು ಪರಿಗಣನೆ ಮಾಡಬೇಕಾಗುತ್ತದೆ. ಕೋಮುವಾದಿ ಪಕ್ಷ, ಮನುವಾದಿ ಪಕ್ಷವನ್ನು ಕಿತ್ತು ಹಾಕಬೇಕು. ಇವರಿಂದ ದೇಶ ಮತ್ತು ರಾಜ್ಯ ಉಳಿಯುವುದಿಲ್ಲ. ಇದು ನಮ್ಮ ಕಾರ್ಯಕರ್ತರ ಅಭಿಪ್ರಾಯವಾಗಿದೆ . ಟಿಕೆಟ್ ಯಾರಿಗೆ ಸಿಗುತ್ತದೆ ಸಿಗುವುದಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು.
ಕೊಪ್ಪಳದಲ್ಲಿ ನಾನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮದುವೆ ಸಮಾರಂಭದಲ್ಲಿ ರಾಜಕೀಯ ಮಾತನಾಡಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಹೆಸರು ಹೇಳಿದ್ದೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.