ಮೈಸೂರು: “ಎಲ್ಲಿ ಬೇಕಾದರೂ ನಿಲ್ಲುವವನು ನಾಯಕ” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ಚುನಾವಣೆಗೆ ಕ್ಷೇತ್ರ ಹುಡುಕುತ್ತಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶವಿದೆ. ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರ, ವರುಣದವರು ಬಯಸಿದರೆ ವರುಣ ಎಂದರು.
ಸಿದ್ದರಾಮಯ್ಯಗೆ ರಾಜಕೀಯವಾಗಿ ಪುನರ್ಜನ್ಮ ಕೊಟ್ಟೆ ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಎಂಟು ಚುನಾವಣೆ ಗೆಲ್ಲುವಾಗ ಕುಮಾರಸ್ವಾಮಿ ಎಲ್ಲಿದ್ದರು. ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು ಯಾವಾಗ? 1996 ರಲ್ಲಿ ಕುಮಾರಸ್ವಾಮಿ ರಾಜಕೀಯಕ್ಕೆ ಬಂದರು. ನಾನು ಅಷ್ಟೊತ್ತಿಗೆ ಚುನಾವಣೆ ಗೆದ್ದಿರಲಿಲ್ಲವೇ? ನಾನು ಹೋಗದ ಕಾರಣ ಸಿದ್ದರಾಮಯ್ಯ ಗೆದ್ದರು ಎಂಬ ಮಾತುಗಳು ಬಾಲಿಶ. ಮತ ಹಾಕಿದ ಮತದಾರರಿಗೆ ಮಾಡಿದ ಅವಮಾನವಿದು ಎಂದರು.