Advertisement

ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜ್ಯೋತಿಷಿಯಾಗಲಿ: ನಳಿನ್ ಕುಮಾರ ಕಟೀಲ್

01:37 PM Feb 14, 2023 | Team Udayavani |

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳಲಿ. ಅವರು ಇನ್ನು ಮುಂದೆ ನಿರುದ್ಯೋಗಿಗಳಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದರು.

Advertisement

ಕೊಪ್ಪಳ ತಾಲೂಕಿನ ಹಲಗೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿಂದೆ ಅವರು ಹೇಳಿದ ಜ್ಯೋತಿಷ್ಯ ಸುಳ್ಳಾಗಿದೆ. ಅಪ್ಪನಾಣೆಗೂ ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಎಂದರು, ಮೋದಿ ಅವರು ಎರಡೆರಡು ಬಾರಿ ಪ್ರಧಾನ ಮಂತ್ರಿಯಾದರು. ಕಳೆದ ಬಾರಿಯೂ ನನ್ನಪ್ಪನಾಣೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದರು. ಅವರೂ ಸಿಎಂ ಆದರು. ಸಿದ್ದರಾಮಯ್ಯ ಅವರು ರಾಜಕಾರಣಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಇಷ್ಟೆಲ್ಲ ಹೇಳುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ. ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿಗೆ ಎಲ್ಲೂ ಕ್ಷೇತ್ರ ಸಿಗುತ್ತಿಲ್ಲ. ಅವರಿಗೆ ಕ್ಷೇತ್ರವೇ ಇಲ್ಲ. ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ. ಹೀಗಾದರೆ ಅವರ ಪಕ್ಷ ಗೆಲ್ಲುವುದು ಹೇಗೆ? ಅವರಿಗೆ ತಾಕತ್ತಿದ್ದರೆ ನಾನು ಇಂಥ ಕ್ಷೇತ್ರದಲ್ಲಿ ನಿಂತು ಗೆಲ್ಲುವೆ ಎಂದು ಹೇಳಲಿ. ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿಗೆ ಕ್ಷೇತ್ರವೇ ಇಲ್ಲ ಎನ್ನುವುದು ಹೀನಾಯ ಸ್ಥಿತಿಯನ್ನು ತೋರಿಸುತ್ತದೆ ಎಂದರು.

ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಲ್ಲಲಿ ಇಲ್ಲವೇ ವರುಣಾ ಕ್ಷೇತ್ರದಲ್ಲಿ ನಿಲ್ಲಲಿ ಅವರನ್ನು ಸೋಲಿಸುತ್ತೇವೆ. ಆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಂತು ನೋಡಲಿ. ಅವರನ್ನ ನಾವು ಸೋಲಿಸುತ್ತೇವೆ. ಅವರ ವಿರುದ್ದ ಯಾರನ್ನ ನಿಲ್ಲಿಸಬೇಕು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಓಡಿಸಿ ಕಳಿಸಿದ್ದಾರೆ. ಅಲ್ಲಿ ನಿಲ್ಲುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಮುನಿಯಪ್ಪ ಕೋಪದಿಂದ ಕುಳಿತಿದ್ದಾರೆ. ಅಲ್ಲಿ ಅವರು ನಿಂತರೆ ನಾವಲ್ಲ, ಕಾಂಗ್ರೆಸ್ ನವರೇ ಸೋಲಿಸಿ ಕಳುಹಿಸುತ್ತಾರೆ ಎಂದರು.

Advertisement

ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರ ಹೇಳಿಕೆ ಸರಿಯಲ್ಲ. ಜಾತಿ ಜಾತಿ ಮಧ್ಯೆ ಮಾತನಾಡುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೂ ವಿನಂತಿ ಮಾಡುವೆ. ಸುದೀರ್ಘವಾದ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಹಾಗೂ ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂದು ಚರ್ಚೆ ಮಾಡೋಣ. ನಮ್ಮ ತಪ್ಪು ಇದ್ದರೆ ಅದನ್ನು ಅವರು ಹೇಳಲಿ. ಅಭಿವೃದ್ಧಿ ಕಾರ್ಯದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆ ಮಾಡೋಣ. ಅದನ್ನು ಅವರು ಜನರ ಮುಂದೆ ಹೇಳಲಿ. ಜನರ ಸಮಸ್ಯೆ ಎತ್ತಿ ಹಿಡಿಯುವ ಕೆಲಸ ಆಗಬೇಕು. ಅವುಗಳನ್ನ ಪ್ರಣಾಳಿಕೆಯಲ್ಲಿ ಸೇರಿಸೋಣ. ಅದನ್ನು ಬಿಟ್ಟು ಜಾತಿ, ಮತದ ಬಗ್ಗೆ ಮಾತನಾಡೋದು ಸರಿಯಲ್ಲ. ಅದು ಅವರಿಗೆ ಭೂಷಣ ಅಲ್ಲ ಎಂದರು.

ಜನಾರ್ದನ ರಡ್ಡಿ ಪಕ್ಷ ಸ್ಥಾಪನೆ ವಿಚಾರ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿ ಇಂಥವರೇ ಪ್ರಧಾನ ಮಂತ್ರಿ ಆಗಬೇಕು ಇಂಥವರೇ ಮುಖ್ಯಮಂತ್ರಿ ಆಗಬೇಕು ಎಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಎಲ್ಲಿಯೂ ಹೇಳಿಲ್ಲ. ಪಕ್ಷ ಸ್ಥಾಪನೆ ಮಾಡುವಲ್ಲಿ ಎಲ್ಲರಿಗೂ ಅಧಿಕಾರವಿದೆ. ಜನಾರ್ಧನ್ ರೆಡ್ಡಿ ಅವರ ಹೇಳಿಕೆಯನ್ನು ನಾನು ನೋಡಿಲ್ಲ ಗಮನಿಸಿಲ್ಲ ಎಂದರು.

ಇದನ್ನೂ ಓದಿ:2024ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುತ್ತಾರಾ? ಸಂದರ್ಶನದಲ್ಲಿ ಶಾ ಹೇಳಿದ್ದೇನು?

ಪದೇ ಪದೆ ಮೋದಿ ಅಮಿತ್ ಅವರನ್ನು ರಾಜ್ಯಕ್ಕೆ ಕರೆಸುವ ವಿಚಾರ, ಕಾಂಗ್ರೆಸ್ ನವರು ಭಾರತ್ ಜೋಡೊ ಯಾತ್ರೆ ಮಾಡಿದರು. ಕರ್ನಾಟಕದಲ್ಲಿ ಇವರಿಗೆ ತಮ್ಮ ಮುಖ ಇಲ್ವಾ? ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಾಕತ್ತಿಲ್ಲ. ರಾಹುಲ್ ಗಾಂಧಿಯನ್ನು, ಪ್ರಿಯಾಂಕ ಗಾಂಧಿಯನ್ನು, ಸೋನಿಯಾ ಗಾಂಧಿಯನ್ನು ಯಾಕೆ ಕರೆಸ್ತಾರೆ? ಚುನಾವಣಾ ಕಣದಲ್ಲಿ ನಾವು ಯಾರಿಗೆ ಉತ್ತರ ಕೊಡಬೇಕೋ ಅವರಿಗೆ ಕೊಡ್ತೇವೆ ಎಂದರು.

ಬಿಜೆಪಿ ಸಂಸದರಿಗೆ ಎಂಎಲ್ಎ ಟಿಕೆಟ್ ಸಿಗುತ್ತೆನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಒಂದು ಪಾರ್ಲಿಮೆಂಟರಿ ಬೋರ್ಡ್ ಇದೆ. ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಆ ಪಾರ್ಲಿಮೆಂಟರಿ ಬೋರ್ಡ್ ನಿಂದ ಮಾತ್ರ ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಹಾಲಪ್ಪ ಆಚಾರ್, ಆನಂದ್ ಸಿಂಗ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು, ಹೇಮಲತಾ ನಾಯಕ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next