ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನತೆಯ ಆಶಯವಾಗಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿ.
ಅವರು ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಉಳಿಯುತ್ತದೆ ಎಂದರು. “ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ, ಸಿಗಲಿಲ್ಲ. ಮೂರು ಬಾರಿ ಶಾಸಕನಾಗಿ ಹಿರಿಯನಿದ್ದೇನೆ. ನಾನು, ರಾಜಕೀಯವಾಗಿ ಸನ್ಯಾಸಿ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಲಿಂಗಾಯಿತರನ್ನು ಕಡೆಗಣಿಸಲಾಗಿದೆ. ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರಿಗೆ ಅಧಿಕಾರ ತಪ್ಪಿಸಲಾಯಿತು.
ಅದರಿಂದ ಆ ಸಂದರ್ಭದಲ್ಲಿ ಆಯಾ ಪಕ್ಷಗಳ ಕಥೆ ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿಲ್ಲ. ಅಲ್ಲಿಯವರನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂದು ಹೇಳಿದರು.
ಬಿಜೆಪಿಯವರು ನಿಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ, “ನನ್ನನ್ನು ಯಾವ ನಾಯಕರೂ ಸಂಪರ್ಕ ಮಾಡಿಲ್ಲ. ಮುಂದೆ ನೋಡೋಣ ಏನಾಗುತ್ತದೆ’ ಅಂತ ತಿಳಿಸಿದರು.
ಇದೇ ವೇಳೆ, ರಮೇಶ್ ಜಾರಕಿಹೊಳಿ ಅವರನ್ನು ರಹಸ್ಯ ಸ್ಥಳದಲ್ಲಿ ಭೇಟಿ ಮಾಡಿರುವ ವಿಚಾರವನ್ನು ಅವರು ಅಲ್ಲಗಳೆದರು. “ನಾನು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯೇ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.