ಬೆಂಗಳೂರು: ಮೇಕೆದಾಟು ಪಾದಯಾತ್ರೆ ನಡೆಸುವ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ 29 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗುಂಪು ಸೇರಬಾರದು ಹಾಗೂ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಆದರೆ, ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಇತರೆ ಎಲ್ಲ ನಾಯಕರು ನಿಯಮ ಉಲ್ಲಂಘಿಸಿದ್ದರು. ಈ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮೇ 24ರಂದು ಖುದ್ದು ವಿಚಾರಣೆ ಹಾಜರಾಗಬೇಕು ಎಂದು ಸಮನ್ಸ್ ಜಾರಿಗೊಳಿಸಿದೆ.
ಕಳೆದ ಜನವರಿ 9ರಂದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದರು. ಕೋವಿಡ್ ನಡುವೆಯೂ ಪಾದಯಾತ್ರೆ ನಡೆಸುವುದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು. ಬಳಿಕ ಹೈಕೋರ್ಟ್ ಸೂಚನೆಯಂತೆ ಜ.13ರಂದು ರಾಮನಗರದಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಿದ್ದರು.
ಈ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಡಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವು ಮುಖಂಡರ ವಿರುದ್ಧ ರಾಮನಗರ ಪೊಲೀಸರು ವಿಪತ್ತು ನಿರ್ವಹಣಾ ತಡೆ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು.