Advertisement
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಸ್ಟಾರ್ ಪ್ರಚಾರಕರನ್ನಾಗಿ ಮಾಡುವುದು. ಆ ನಂತರ ಒತ್ತಾಯಪೂರ್ವಕವಾಗಿ ಕಣಕ್ಕಿಳಿಸುವುದು, ಆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸ್ವಾಗತ ಕೋರುವುದು ಕಾರ್ಯತಂತ್ರದ ಭಾಗ. ಜತೆಗೆ ಸಿದ್ದರಾಮಯ್ಯ ಅವರಿಂದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಒತ್ತಡದಲ್ಲಿ ಕೆಲಸಮಾಡುವಂತಾಗಿದ್ದು, ಅದನ್ನು ನಿವಾರಿಸುವುದು ಇದರ ಮೂಲ ಉದ್ದೇಶ.
Related Articles
Advertisement
ಜತೆಗೆ, ಇತ್ತೀಚೆಗೆ ರಾಹುಲ್‌ಗಾಂಧಿ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಟ್ಟು ಬಂದಿದ್ದಾರೆ. ಹೀಗಾಗಿ, ಅಂತಿಮವಾಗಿ ಸಿದ್ದರಾಮಯ್ಯಅವರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ತಪ್ಪಿಸಲು ಹೈಕಮಾಂಡ್ ಸರಳ ಸೂತ್ರ ಸಿದ್ಧಪಡಿಸಿಕೊಂಡಿದೆ.
ತಂತ್ರವೇನು?ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಎದುರಿಸಲು ರಾಷ್ಟ್ರಮಟ್ಟದಲ್ಲಿ ವರ್ಚಸ್ವಿ ನಾಯಕರ ಅಗತ್ಯವಿದ್ದು, ವಾಗಾœಳಿ ನಡೆಸಲು ಸಿದ್ದರಾಮಯ್ಯ ಸೂಕ್ತ ಎಂದು ಹೇಳಿ ಸ್ಟಾರ್ ಪ್ರಚಾರಕ ಪಟ್ಟ ನೀಡಿ ಕರೆಸಿಕೊಳ್ಳುವುದು. ಜತೆಗೆ ಒತ್ತಾಯಪೂರ್ವಕವಾಗಿ ಲೋಕಸಭೆ ಚುನಾವಣೆಗೆ ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರಗಳಿಂದ ನಿಲ್ಲಿಸುವುದು ಸರಳ ಸೂತ್ರದ ತಂತ್ರ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರೊಬ್ಬರನ್ನೇ ಲೋಕಸಭೆ ಚುನಾವಣೆ ಕಣಕ್ಕಿಳಿಸಿದರೆ ಬೇರೆ ರೀತಿಯ ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಇನ್ನೂ ಹಲವರ ಹೆಸರು ಪರಿಶೀಲನೆಯಲ್ಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಹಾಗೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶಿವಾಜಿನಗರ ಶಾಸಕ ರೋಷನ್‌ಬೇಗ್ ಅವರ ಹೆಸರು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಲು ಪರಿಶೀಲನೆಯಲ್ಲಿದೆ. ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ, ಎಂ.ಕೃಷ್ಣಪ್ಪ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ , ರೋಷನ್‌ಬೇಗ್ ಅವರನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆಯಿದೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸೀಟು ಗೆಲ್ಲುವ ಗುರಿ ಹೊಂದಿರುವ ರಾಹುಲ್‌ಗಾಂಧಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಸೂಚನೆ ನೀಡಿದ್ದಾರೆ ಎಂಬ ನೆಪವೊಡ್ಡಿ ಸಿದ್ದರಾಮಯ್ಯ ಸೇರಿದಂತೆ ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಮೈಸೂರು ಕ್ಷೇತ್ರದಿಂದಲೇ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರವೂ ಇತ್ತಾದರೂ ಚಾಮುಂಡೇಶ್ವರಿ ಚುನಾವಣೆಯ ಸೋಲಿನ ನಂತರ ಮೈಸೂರಿನಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ಒಪ್ಪುವ ಸಾಧ್ಯತೆ ಕಡಿಮೆ. ಹೀಗಾಗಿ, ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸಾಗ ಹಾಕಿ ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರಗೊಳಿಸುವುದು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಅವರಿಗೆ ರಾಜ್ಯದ ಉಸ್ತುವಾರಿ ವಹಿಸುವ ಲೆಕ್ಕಾಚಾರದೊಂದಿಗೆ ಈ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ. ಹೈಕಮಾಂಡ್ ಲೆಕ್ಕಾಚಾರ
ಸಿದ್ದರಾಮಯ್ಯ ಅವರ ಸೇವೆ ರಾಷ್ಟ್ರ ರಾಜಕಾರಣಕ್ಕೆ ಅಗತ್ಯವಿದೆ. ಅವರು ಕಾಂಗ್ರೆಸ್‌ನ ವರ್ಚಸ್ವೀ ನಾಯಕರು ಎಂದು ಸ್ಟಾರ್ ಪ್ರಚಾರಕರ ಪಟ್ಟ ನೀಡಿ ಕರೆಸಿಕೊಂಡರೆ ಕುರುಬ ಸಮುದಾಯ ಹಾಗೂ ಅವರ ಬೆಂಬಲಿಗರಲ್ಲೂ ಅಸಮಾಧಾನ ಉಂಟಾಗುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದರಿಂದ ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರದಿಂದ ಅವರನ್ನು ಗೆಲ್ಲಿಸಲು ಕಷ್ಟವಾಗದು. ಲೋಕಸಭೆಗೆ ಆಯ್ಕೆಯಾದರೆ ಸಮ್ಮಿಶ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ಅವರ ಹಿಡಿತ ತನ್ನಿಂತಾನೆ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ ಹೈಕಮಾಂಡ್‌ನದು. – ಎಸ್. ಲಕ್ಷ್ಮಿನಾರಾಯಣ