ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತಲಾಶೆ ಮುಂದುವರಿದಿದ್ದು ಇದೀಗ ಹುಣಸೂರಿನತ್ತ ಚಿತ್ತ ಹರಿದಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆಮಾಡಿ ಗೆಲ್ಲುವ ಮೂಲಕ ಕಳೆದ ಬಾರಿಯಸೋಲಿನ ಹಣೆಪಟ್ಟಿ ಕಳಚಿಕೊಳ್ಳಬೇಕುಎಂಬ ಮಹದಾಸೆ ಇದೆಯಾದರೂಜಿ.ಟಿ.ದೇವೇಗೌಡರು ಕ್ಷೇತ್ರ ಬಿಟ್ಟುಕೊಡಲು ಬಿಲ್‌ಕುಲ್ ಒಪ್ಪುತ್ತಿಲ್ಲ. ಹೀಗಾಗಿ, ಕೋಲಾರ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಹೆಬ್ಬಾಳ ನಂತರ ಇದೀಗ ಹುಣಸೂರಿನ ಕಡೆ ಕಣ್ಣು ಹಾಯಿಸಿದ್ದಾರೆ.
ಹುಣಸೂರಿನಲ್ಲಿ ಕುರುಬ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗದ ಮತದಾರರು ಹೆಚ್ಚಾಗಿರುವುದು ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ತೀರ್ಮಾನಿಸಿರುವುದು. ತಮ್ಮ ಆಪ್ತ ಎಚ್.ಪಿ.ಮಂಜುನಾಥ್ ಆ ಕ್ಷೇತ್ರ ಪ್ರತಿನಿಧಿಸುತ್ತಿರುವುದು ಸೇರಿದಂತೆ ಎಲ್ಲವನ್ನೂ ಲೆಕ್ಕಾಚಾರ ಹಾಕಿ ಹುಣಸೂರು ಸುರಕ್ಷಿತ ಎಂಬ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಇದೆಯಾದರೂ ಬಹಿರಂಗ ವೇದಿಕೆಯಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿ ಕ್ಷೇತ್ರ ಬಿಟ್ಟು ಹೋಗಿ ಎಂದು ಹೇಳಿದ ಪ್ರಸಂಗ ನಡೆದ ನಂತರ ಮತ್ತೆ ಆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಹೀಗಾಗಿ, ಬೇರೆ ಸುರಕ್ಷಿತ ಕ್ಷೇತ್ರದಲ್ಲಿ ತಲಾಶೆಯಲ್ಲಿದ್ದರು.
ಚಾಮರಾಜಪೇಟೆ, ಹೆಬ್ಬಾಳ, ಕೋಲಾರದ ಕ್ಷೇತ್ರ ಸೇರಿ ಐದು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಆಂತರಿಕವಾಗಿ ಸಿದ್ದರಾಮಯ್ಯಮಾಹಿತಿ ಸಂಗ್ರಹಿಸಿದ್ದರು. ಚಾಮರಾಜಪೇಟೆಗೆ ಹೋದರೆಮುಸ್ಲಿಂ ಮತದಾರರು ಹೆಚ್ಚಾಗಿದ್ದಾರೆ ಎಂದು ಹೋದರು ಎಂಬ ಆರೋಪ ಎದುರಾಗಬಹುದು. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ಶಕ್ತಿಯುತವಾಗಿದ್ದು , ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಾಗಿರುವುದು. ತಮ್ಮದೇ ಸಮುದಾಯದ ವರ್ತೂರು ಪ್ರಕಾಶ್ ಪಕ್ಷೇತರ ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿರುವುದರಿಂದ ಅಲ್ಲಿ ಬೇಡ ಎಂದು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಹೆಬ್ಟಾಳದಲ್ಲೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದಾರೆ.
ಹೀಗಾಗಿ, ತವರು ಜಿಲ್ಲೆಯ ಹುಣಸೂರು ಕ್ಷೇತ್ರದ ಮೇಲೆ ದೃಷ್ಟಿ ನೆಟ್ಟಿದ್ದಾರೆ ಎಂದು ಹೇಳಲಾಗಿದೆ. ಒಂದೊಮ್ಮೆ ಹುಣಸೂರಿನಿಂದ ಸಿದ್ದರಾಮಯ್ಯ ಕಣಕ್ಕಿಳಿದರೆ ಅಲ್ಲಿನ ಶಾಸಕ ಎಚ್.ಪಿ.ಮಂಜುನಾಥ್ ಲೋಕಸಭೆ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಜಿ.ಟಿ.ದೇವೇಗೌಡರುಕಾಂಗ್ರೆಸ್‌ಗೆ ಬಂದರೆ ಸಿದ್ದರಾಮಯ್ಯ ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಅನುಕೂಲವಾಗುತ್ತದೆ ಎಂಬ ಮಾತುಗಳೂ ಇವೆ.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆನಾ? :
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯವ್ಯಾಪಿಪ್ರವಾಸ ಮಾಡಬೇಕಾಗಿರುವುದರಿಂದ ಸುರಕ್ಷಿತ ಕ್ಷೇತ್ರ ಆಯ್ಕೆಮಾಡಿಕೊಳ್ಳಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರಾ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
–ಎಸ್.ಲಕ್ಷ್ಮಿನಾರಾಯಣ