ಮೈಸೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಈ ವಸತಿನಿಲಯ ಪ್ರಾರಂಭವಾಗುತ್ತಿರುವುದು ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದೆ ಎಂದು ಕಾಗಿನಲೆ ಕನಕಗುರು ಪೀಠ ಮೈಸೂರು ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು. ವಿಜಯನಗರದ 2ನೇ ಹಂತದಲ್ಲಿರುವ ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ವಿದ್ಯಾರ್ಥಿನಿಲಯರಿಗೆ ಬೆಳಗಿನ ಉಪಹಾರ ಬಡಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ವಸತಿನಿಲಯ ರಾಜ್ಯದಲ್ಲಿಯೇ ಸುಸಜ್ಜಿತ ಹಾಗೂ ಸುರಕ್ಷಿತವಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಪಿಯುಸಿ ಯಿಂದ ಎಂಜಿನಿಯರಿಂಗ್‌ವರೆಗೆ ಓದುವ ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ಬಿಜಾಪುರ, ಬಳ್ಳಾರಿ, ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬಂದು ಸೇರಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಆಗಬೇಕಾಗಿದ್ದ ವಸತಿನಿಲಯ ಈಗ ಆಗಿರುವುದು ಸಂತೋಷವಾಗಿದೆ ಎಂದರು.
ಈ ವಸತಿನಿಲಯದಲ್ಲಿ 400 ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಆದರೆ ಈ ವರ್ಷ ಸುಮಾರು 200 ವಿದ್ಯಾರ್ಥಿನಿಯರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ವಸತಿನಿಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ, ದಾನಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಕೆ. ಮರಿಗೌಡ ಮಾತನಾಡಿ, ವಸತಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಬಿಸಿನೀರಿನ ವ್ಯವಸ್ಥೆಗೆ ವಿದ್ಯುತ್ ಬಾಯ್ಲರ್‌ಅನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದರು.
ಸಮಾಜದ ಮುಖಂಡರಾದ ನಿವೃತ್ತ ಹಿರಿಯ ಅಧಿಕಾರಿ ಚಿಕ್ಕಸ್ವಾಮಿ, ವಕೀಲರಾದ ಶಿವಣ್ಣ, ಎಂ. ಮಲ್ಲಯ್ಯ, ಕಾಗಿನೆಲೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪುಟ್ಟಬಸವೇಗೌಡ, ಜಿಲ್ಲಾ ಬಿಸಿಎಂ ಅಧಿಕಾರಿ ಜಿ.ಎಸ್. ಸೋಮಶೇಖರ್, ಡಾ.ದಿನೇಶ್, ಕುಮಾರಸ್ವಾಮಿ, ಮಂಜುಳ, ಸರಸ್ವತಿ, ಶೀಲಾ, ಕಲಾವತಿ, ಸುಮಾ ಜಗನ್ನಾಥ್‌ಬಾಬು, ಗೀತಾ, ಚಂದ್ರು, ಮಹೇಶ್ ಎಫ್.ಎಂ., ಶಿವಬೀರಪ್ಪ ಹಾಜರಿದ್ದರು.