ಬೆಂಗಳೂರು : ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಗೆ ಪ್ರಶ್ನೆ ಮಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರದಲ್ಲಿ ಪ್ರಧಾನಿಯಾಗಿರುವುದು ರಾಹುಲ್ ಗಾಂಧಿಯೋ, ನರೇಂದ್ರ ಮೋದಿಯೋ ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಭೇಟಿ ಮಾಡುವುದಕ್ಕೆ ಬಿಜೆಪಿಯ ಸಂಸದರು ಹಾಗೂ ಸಚಿವರಿಗೆ ಅಂಜಿಕೆಯೇ ? ಭಯವಾದರೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಿರಿ. ನಾವು ಬಂದು ವಿವರಣೆ ನೀಡುತ್ತೇವೆ ಎಂದು ಕಾಲೆಳೆದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರಿಗೆ ಪತ್ರ ಬರೆದಿದ್ದರು. ಅದನ್ನು ಬಿಟ್ಟರೆ ಮೇಕೆದಾಟು ವಿಚಾರದಲ್ಲಿ ಕಳೆದ ಎರಡು ವರ್ಷದಿಂದ ಬಿಜೆಪಿ ಯಾವುದೇ ಪ್ರಯತ್ನ ಮಾಡಿಲ್ಲ. ಈಗ ನೀವು ಕಾಂಗ್ರೆಸ್ ಪಕ್ಷವನ್ನು ಏಕೆ ದೂರುತ್ತೀರಿ ? ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ಸೋ, ಬಿಜೆಪಿಯೋ ಎಂದು ಪ್ರಶ್ನೆ ಮಾಡಿದ್ದಾರೆ.
ಮೇಕೆದಾಟು ಯೋಜನೆ ಈಗ ಕೇಂದ್ರ ಸರಕಾರದ ಅಂಗಳದಲ್ಲಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ಒಪ್ಪಿಗೆ ಪಡೆದುಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.