ಬೀದರ: ಬೆಂಬಲ ಬೆಲೆಗೆ ತೊಗರಿ ಖರೀದಿ ಪ್ರಕ್ರಿಯೆ ವಿಳಂಬದಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಕೇಂದ್ರಗಳನ್ನು ಆರಂಭಿಸಿ ಪ್ರತಿ ರೈತರಿಂದ 25 ಕ್ವಿಂಟಲ್ ತೊಗರಿ ಖರೀದಿಸಬೇಕು. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಿಯೂ ತೊಗರಿ ಖರೀದಿ ಕೇಂದ್ರಗಳು ಆರಂಭಗೊಂಡಿಲ್ಲ, ಖರೀದಿಯೂ ಆಗುತ್ತಿಲ್ಲ. ತೊಗರಿ ಖರೀದಿ ಮಿತಿ 10ರಿಂದ 20 ಕ್ವಿಂಟಲ್ ಹೆಚ್ಚಿಸಿರುವ ಕುರಿತು ಈವರೆಗೆ ಸರ್ಕಾರದ ಆದೇಶ ಆಗಿಲ್ಲ. ಸಿಎಂ ಯಡಿಯೂರಪ್ಪ ಬೀದರನಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಖರೀದಿ ಪ್ರಕ್ರಿಯೆ ವಿಳಂಬ ಮಾಡುವುದರಿಂದ ರೈತರಿಗೆ ಅನ್ಯಾಯವಾಗಲಿದ್ದು, ಮಧ್ಯವರ್ತಿ ಮತ್ತು ವ್ಯಾಪಾರಿಗಳಿಗೆ ಲಾಭವಾಗಲಿದೆ ಎಂದರು.
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಚಿವ ಆನಂದ್ ಸಿಂಗ್ ಮೇಲೆ ಹಲವು ಪ್ರಕರಣಗಳಿವೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಅವರಿಗೆ ಅರಣ್ಯ ಖಾತೆ ನೀಡಿರುವುದು “ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ’ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಆನಂದ್ ಸಿಂಗ್ ಅವರು ಅರಣ್ಯ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ ಯಡಿಯೂರಪ್ಪ ಅವರೇ ಖಾತೆ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಿದ್ದು, ರಾಜ್ಯ ಸರ್ಕಾರ ಅಲ್ಲಾಡುವ ಸ್ಥಿತಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಮ್ ಖಾನ್, ಬಿ.ನಾರಾಯಣರಾವ್, ಅರವಿಂದ ಅರಳಿ, ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.