Advertisement

ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

03:41 PM Oct 23, 2021 | Team Udayavani |

ಸೊರಬ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸುಳ್ಳು ಆಶ್ವಾಸನೆಗಳು ಹಾಗೂ ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದು, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದರು.

Advertisement

ತಾಲೂಕಿನ ಕುಬಟೂರು ಗ್ರಾಮದ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಈ ಹಿಂದೆ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಆದರೆ, ಈ ಬಾರಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಇದೆ. ಜೆಡಿಎಸ್ ಅಲ್ಪ ಸಂಖ್ಯಾತರ ಮತಗಳನ್ನು ಇಬ್ಬಾಗಿಸಲು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ವಿನಃ, ನೇರ ಸ್ಪರ್ಧೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಜನತೆ ಒಲವು ಹೊಂದಿದ್ದಾರೆ ಎಂದರು.

ಅಚ್ಛೇದಿನ್ ಎಲ್ಲಿದೆ?: ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೆದಿನ ಬರುತ್ತದೆ ಎಂದು ಮನ್ ಕೀ ಬಾತ್‍ನಲ್ಲಿ ಹೇಳುತ್ತಾರೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಕುರಿತು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಾ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಸಾಲವನ್ನು ತೀರಿಸಲಾಗುತ್ತಿದೆ. ತೆರಿಗೆಯಿಂದ ಸಂಗ್ರಹವಾದ ಹಣವನ್ನು ಅಭಿವೃದ್ಧಿ ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಸಹ ಬಾಂಡ್‍ಗಳ ಮೂಲಕ ಸಾಲ ಮಾಡಲಾಗಿತ್ತು. ಪ್ರಸ್ತುತ ಒಂದು ಲಕ್ಷದ ಮೂವತ್ತು ಸಾವಿರ ಕೋಟಿ ರೂ., ಸಾಲವನ್ನು ತೀರಿಸುತ್ತೇವೆ ಎಂದು 23 ಲಕ್ಷ ಕೋಟಿ ರೂ., ಸಂಗ್ರಹಿಸಿದ್ದಾರೆ ಎಂದರು.

ಜನತೆಗೆ ಹೊರೆಯಾದ ತೈಲ ಬೆಲೆ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‍ಗೆ 125 ರೂ., ಇತ್ತು. ಆಗ ಪೆಟ್ರೋಲ್ 69.70 ರೂ., ಹಾಗೂ ಡಿಸೇಲ್ ಬೆಲೆ 47 ರೂ., ಇತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‍ಗೆ 80 ರೂ., ಇರುವಾಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಇದರ ಜೊತೆಗೆ 414 ರೂ., ಇದ್ದ ಅಡುಗೆ ಅನಿಲದ ಬೆಲೆ 980 ರೂ., ಆಗಿದ್ದು, ಜನತೆಗೆ ಹೊರೆಯಾಗುತ್ತಿದೆ. ಈ ನಡುವೆ ಸಚಿವರೊಬ್ಬರು ತೈಲಗಳ ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದ ಎಂದ ಅವರು, ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ವಸತಿ ರಹಿತರಿಗೆ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ ಎಂದರು.

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ:  ದೇಶದಲ್ಲಿ ಸತ್ಯವನ್ನು ನುಡಿಯಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಲಖಿಮ್‍ಪುರದಲ್ಲಿ ರೈತರ ಪ್ರತಿಭಟನೆಯ ಮೇಲೆ ಕೇಂದ್ರ ಸಚಿವರ ಪುತ್ರನ ಕಾರು ಹರಿಸಿದ ಸಂದರ್ಭದಲ್ಲಿ ರೈತರಿಗೆ ಸಾಂತ್ವಾನ ಹೇಳಲು ತೆರಳಿದ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಲಾಗುತ್ತದೆ. ಬಿಜೆಪಿಯ ವಿರುದ್ಧ ಮಾತನಾಡುವವರ ಮೇಲೆ ಐಟಿ-ಇಡಿ  ದಾಳಿ ಮಾಡಿಸುವುದು. ಸತ್ಯವನ್ನು ನುಡಿದ ಮಾಧ್ಯಮಗಳಿಗೆ ನೊಟೀಸ್ ನೀಡುವುದು ಮಾಡುತ್ತಿರುವ ಬಿಜೆಪಿಗೆ ಜನತೆ ತಕ್ಕ ಉತ್ತರ ನೀಡಲಿದ್ದು, ಪ್ರಸ್ತುತ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Advertisement

ಇದನ್ನೂ ಓದಿ: ಬಿಜೆಪಿ ಜ್ಯಾತ್ಯಾತೀತವಾದರೆ ಮುಸ್ಲಿಮರು ಬಿಜೆಪಿ ಜೊತೆ ಇರುತ್ತಾರೆ: ರೆಹಮಾನ್ ಖಾನ್

ರೈಟ್ ಪರ್ಸನ್ ಇನ್ ರೈಟ್ ಪಾರ್ಟಿ: 

ಈವರೆಗೂ ರೈಟ್ ಪರ್ಸ್‍ನ್ ರಾಂಗ್ ಪಾರ್ಟಿಯಲ್ಲಿದ್ದರು. ರಾಜ್ಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ರೈಟ್ ಪರ್ಸ್‍ನ್ ರೈಟ್ ಪಾರ್ಟಿಗೆ ಸೇರಿದಂತಾಗಿದೆ. ಕಾಂಗ್ರೆಸ್ ಎಲ್ಲಾ ನಾಯಕರಿಗೂ ಸ್ಥಾನ ಮಾನಗಳನ್ನು ನೀಡುತ್ತದೆ. ತಾವು ಈ ಹಿಂದೆ ಕಾಂಗ್ರೆಸ್ ಸೇರಿದಾಗ ಯಾವ ಹುದ್ದೆ ನೀಡುವರು ಎಂದು ಕಾರ್ಯಕರ್ತರು ಮತ್ತು ಮಾಧ್ಯಮದವರು ಪ್ರಶ್ನಿಸುತ್ತಿದ್ದರು. ಆದರೆ, ಮುಖ್ಯಮಂತ್ರಿ ಸ್ಥಾನವನ್ನೇ ನೀಡಲಿಲ್ಲವೇ ಎಂದು ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆಯ ನಂತರದ ಸ್ಥಾನಮಾನದ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಜೆಡಿಎಸ್ ಈಗ ಜೆಡಿಎಫ್!: 

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಎಚ್.ಡಿ. ದೇವೇಗೌಡರು ಮಾತ್ರ ಕಟ್ಟಲಿಲ್ಲ. ನಾನು ಸೇರಿ ಅನೇಕ ನಾಯಕರು ಸೇರಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಜೆಡಿಎಸ್ ಪಕ್ಷ ಜೆಡಿಎಸ್ ಪಕ್ಷವಾಗಿ ಉಳಿದಿಲ್ಲ. ಕುಟುಂಬದ ಪಕ್ಷವಾಗಿದ್ದು ಜೆಡಿಎಫ್ ಆಗಿದೆ. ಎಫ್ ಅಂದರೆ ಫ್ಯಾಮಿಲಿ ಪಾರ್ಟಿ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಸಂವಿಧಾನದ ಬಗ್ಗೆ ಗೌರವವನ್ನು ಹೊಂದಿಲ್ಲ. ಕಾಂಗ್ರೆಸ್‍ನಿಂದ ಮಾತ್ರ ಅಹಿಂದ ಹಾಗೂ ಬಡವರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಜ್ಯಾತ್ಯಾತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಆಂತರಿಕ ಕೋಮುವಾದಿ ಪಕ್ಷ ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ, ವಿಪ ಸದಸ್ಯ ಆರ್. ಪ್ರಸನ್ನ ಕುಮಾರ್, ಡಾ. ರಾಜನಂದಿನಿ, ಉಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಮಹಾದೇವಪ್ಪ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಸಿ. ಪಾಟೀಲ್, ಅಣ್ಣಪ್ಪ ಹಾಲಘಟ್ಟ, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಮಂಜುನಾಥ ಕುಬಟೂರು, ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next