ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಜಾಫರ್ ಷರೀಫ್ ಮತ್ತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದು, ಸಿದ್ದರಾಮಯ್ಯ ಪಕ್ಷದಲ್ಲಿ ಒನ್ ಮ್ಯಾನ್ ಶೋ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ಹಿರಿಯ ನಾಯಕರು ಮೂಲೆ ಗುಂಪಾಗಿದ್ದು, ಎಲ್ಲೆಡೆ ಸಿದ್ದರಾಮಯ್ಯ ಫೋಟೊ ರಾರಾಜಿಸುತ್ತಿದೆ.
ಹೈಕಮಾಂಡ್ ಲೋ ಕಮಾಂಡ್ ಆಗಿದ್ದು, ಸಿದ್ದರಾಮಯ್ಯ ಹೈಕಮಾಂಡ್‌ನ್ನು ನೋಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು, ರಾಹುಲ್ ಗಾಂಧಿ ಕೇವಲ ಮುದ್ರೆ ಒತ್ತುವ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದು ಸರಿಯಲ್ಲ. ಕಾಂಗ್ರೆಸ್ ಇತಿಹಾಸದಲ್ಲಿಯೇ ಇಂತಹ ಕೆಲಸ ಯಾರೂ ಮಾಡಿರಲಿಲ್ಲ ಎಂದರು.
ರೆಹಮಾನ್ ಷರೀಫ್ ಸ್ಪರ್ಧೆ ಇಲ್ಲ: ಹೆಬ್ಟಾಳ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಹಲವು ಬಾರಿ ಚುನಾವಣೆಯಲ್ಲಿ ಸೋತು ಸುಸ್ತಾಗಿದ್ದೇವೆ.
ಕುಟುಂಬವನ್ನು ಬೀದಿಗೆ ತರಲು ನನಗೆ ಇಷ್ಟವಿಲ್ಲ. ಹೀಗಾಗಿ, ಮೊಮ್ಮಗನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. “ಬೈರತಿ ಸುರೇಶ್ ಹೆಬ್ಟಾಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್ ಕೊಟ್ಟರೆ ಅವರ ಗೆಲುವಿಗೆ ಶ್ರಮಿಸುತ್ತೇವೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಪುನರುಚ್ಚರಿಸಿದರು.