ಬೆಂಗಳೂರು: ನಾವು ಹೊಗಳು ಭಟ್ಟರೂ ಅಲ್ಲ, ವ್ಯಕ್ತಿ ಪೂಜೆನೂ ಮಾಡುತ್ತಿಲ್ಲ. ಪಕ್ಷದ ಚಿಹ್ನೆ ಬಳಸಿ ಜನ್ಮದಿನ ಆಚರಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಸದಸ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ, ತಪ್ಪು ಸಂದೇಶ ಕೊಡುವ ಉದ್ದೇಶ ಇಲ್ಲ. ಸಿದ್ಧರಾಮೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯರ ವೈಭವೀಕರಣಕ್ಕೆ ಅಲ್ಲ ಎಂದರು.
ವ್ಯಕ್ತಿ ಪೂಜೆಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸಿದ್ದರಾಮಯ್ಯ ಹೋರಾಟ ದಾಖಲು ಮಾಡುವ ಕೆಲಸ. ಹೋರಾಟ ಯಾವಾಗಲೂ ಚರಿತ್ರೆ ನಿರ್ಮಾಣ ಮಾಡಲಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸ ಗಮನಿಸುತ್ತೇವೆ. ಸಿದ್ದರಾಮಯ್ಯ ಮಂಡಿಸಿದ 13 ಬಜೆಟ್ ಗಳ ಬಗ್ಗೆ ಅವಲೋಕನ ಮಾಡುವುದು. 135 ಭರವಸೆಗಳನ್ನು ಈಡೇರಿಸಿದ ಸಿದ್ದರಾಮಯ್ಯ ಅವರ ಕೆಲಸ ನೋಡಬೇಕಾಗಿದೆ ಎಂದರು.
ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ಬಗ್ಗೆ ತುಲನೆ ಮಾಡಲಾಗ್ತಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಉತ್ತಮರಾಗಿದ್ದರು. ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. ಸಾರ್ಥಕ ಸಾರ್ವಜನಿಕ ಬದುಕು ಪೂರೈಸಿರುವ ಸಿದ್ದರಾಮಯ್ಯ ಅವರ ಬಗ್ಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಈ ಸಮಾವೇಶ ಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ: ಘನ ವಾಹನಗಳ ಸಂಚಾರ ಬಂದ್
ಕಾಂಗ್ರೆಸ್ ನಲ್ಲಿ ನಾಯಕನೊಬ್ಬನ ಹುಟ್ಟುಹಬ್ಬದ ಆಚರಣೆ ಪಕ್ಷದ ವತಿಯಿಂದ ಮಾಡಿಲ್ಲ. ಸಿದ್ದರಾಮಯ್ಯ ಹುಟ್ಟುಹಬ್ಬದ ಸಮಾವೇಶ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷದೊಳಗಿನ ವ್ಯಕ್ತಿಗಳು, ಸ್ನೇಹಿತರು ಸೇರಿ ಮಾಡಿರುವ ಸಮಿತಿ. ಇದರ ಮೂಲಕ ಸಮಾವೇಶ ಮಾಡುತ್ತಿದ್ದೇವೆ. ಪಕ್ಷದ ಚಿಹ್ನೆ ಬಳಸಿ ವ್ಯಕ್ತಿಯ ಹುಟ್ಟುಹಬ್ಬದ ಆಚರಣೆ ಮಾಡಿದ ಉದಾಹರಣೆ ಇಲ್ಲ ಎಂದರು.
ಶಿವಕುಮಾರೋತ್ಸವ ಮಾಡುವಂತೆ ಡಿಕೆಶಿ ಆಪ್ತರು ಪತ್ರ ಬರೆದ ವಿಚಾರಕ್ಜೆ ಪ್ರತಿಕ್ರಿಯಿಸಿ, ಪತ್ರ ನಮ್ಮ ಸಮಿತಿಗೆ ತಲುಪಿದ ಬಗ್ಗೆ ಮಾಹಿತಿ ಇಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಅದನ್ನು ಪ್ರಶ್ನಿಸಲು ಅಧಿಕಾರ ನಮಗೇನಿದೆ ?ಯಾರು ಏನು ಬೇಕಾದರೂ ಮುಕ್ತವಾಗಿ ಮಾಡಬಹುದು ಎಂದರು.