ಮೈಸೂರು: ಆರೆಸ್ಸೆಸ್ ಬಗ್ಗೆ ಪದೇ ಪದೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ದೃಷ್ಟಿದೋಷವಿದೆ. ಅವರಿಗೆ ವಯಸ್ಸಾಗುತ್ತಿದ್ದು, ಚಿಕಿತ್ಸೆ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.
ಜಾತ್ಯತೀತತೆ, ಅಹಿಂಸೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರೆಸ್ಸೆಸ್ ಕಂಡರೆ ಭಯ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿ, ಯಾವ ಆಧಾರದ ಮೇಲೆ ಆರೆಸ್ಸೆಸ್‌ನನ್ನು ಭಯೋತ್ಪಾದಕ ಸಂಘಟನೆ ಎಂದು ಅಪಪ್ರಚಾರ ಮಾಡುತ್ತಿದ್ದೀರಿ ?. ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶುಲ್ಕವಿಲ್ಲದೇ, ಯಾವುದೇ ಆದಾಯ ನಿರೀಕ್ಷಿಸದೇ ಸಹಸ್ರಾರು ಮಕ್ಕಳಿಗೆ ಆರೆಸ್ಸೆಸ್ ಶಿಕ್ಷಣ ನೀಡುತ್ತಿದೆ. ಸಿದ್ದರಾಮಯ್ಯನವರಿಗೆ ದೃಷ್ಟಿದೋಷ ಇರುವುದರಿಂದ ಹೀಗೆಲ್ಲ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ಸುತ್ತಲು ಇರುವ ಬೆಂಬಲಿಗರೇ ಭಯೋ ತ್ಪಾದಕರು. ಕೆಲ ವರ್ಷಗಳ ಹಿಂದೆ ನಿಮ್ಮದೇ ಶಾಸಕರ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದು ಡಾಳಾಗಿ ಕಾಣಿಸುತ್ತಿದೆ. ಸುಖಾ ಸುಮ್ಮನೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನಿಮಗೆ ದೃಷ್ಟಿ ದೋಷವಿದೆ. ಜತೆಗೆ ವಯಸ್ಸಾಗುತ್ತಿರುವುದರಿಂದ ಚಿಕಿತ್ಸೆಯ ಅಗತ್ಯವೂ ಇದೆ.ಇಷ್ಟು ವರ್ಷ ರಾಜಕೀಯ ಜೀವನದಲ್ಲಿ ಇದ್ದರೂ ದೇಶಕ್ಕೆ ಒಳ್ಳೆಯವರು ಯಾರು ? ಯಾರಿಂದ ಅಪಾಯ ಎಂದು ತಿಳಿಯುವಷ್ಟು ಪಕ್ಷತೆ ಅವರಲ್ಲಿ ಇಲ್ಲವಲ್ಲ ಎಂಬ ಬೇಸರವಿದೆ ಎಂದು ಲೇವಡಿ ಮಾಡಿದರು.
ನಿಮ್ಮ ಸರ್ಟಿಫಿಕೆಟ್ ಅಗತ್ಯವಿಲ್ಲ: ಇಡೀ ದೇಶದ
ಜನತೆಗೆ ಆರೆಸ್ಸೆಸ್ ದೇಶ ಭಕ್ತ ಸಂಘಟನೆ ಎಂಬುದು ತಿಳಿಸಿದೆ. ಹಾಗಾಗಿ ಜನತೆಗೆ ಆರೆಸ್ಸೆಸ್ ಏನು ಎಂಬುದರ ಬಗ್ಗೆ ಸಿದ್ದರಾಮಯ್ಯರ ಸರ್ಟಿಫಿಕೆಟ್ ಅಗತ್ಯವಿಲ್ಲ. ಸಿದ್ದರಾಮಯ್ಯ ಈಗಲಾದರೂ ಸುಳ್ಳು ಹೇಳುವುದನ್ನು ಬಿಡಬೇಕು . ಮುಂದಿನ ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಿ, ಆರೆಸ್ಸೆಸ್‌ನ್ನು ಪ್ರಶಂಸಿಸುವ ಕಾಲ ದೂರವಿಲ್ಲ ಎಂದು ತಿರುಗೇಟು ನೀಡಿದರು.
Related Articles
ಆರೆಸ್ಸೆಸ್ ಲಾಭದಾಯಕ ಸಂಘಟನೆ ಅಲ್ಲ: ಆರೆಸ್ಸೆಸ್ ನಲ್ಲಿ ಉನ್ನತ ಪದಾಧಿಕಾರಿಗಳ ಹುದ್ದೆ ಒಂದು ಜಾತಿಗೆ ಸೀಮಿತವಾಗಿದೆ. ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸಿಗುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರೆಸ್ಸೆಸ್ ದೇಶಭಕ್ತ ಸಂಘಟನೆಯಾಗಿದ್ದು, ಯಾವುದೇ ಲಾಭದಾಯ ಸಂಘಟನೆಯಲ್ಲ. ಇಲ್ಲಿ ಎಲ್ಲಾ ಸಮಾಜದವರಿಗೂ ಅವಕಾಶ ಇದೆ ಎಂದರು.
ಟಿಪ್ಪುವಿಗೂ ನಿಮಗೂ ಏನು ಸಂಬಂಧ: ನಮಗೆ ಆರೆಸ್ಸೆಸ್ ಮಾತೃ ಸಂಸ್ಥೆ. ನಮಗೂ ಮತ್ತು ಆ ಸಂಘಟನೆಗೂ ತಾಯಿ-ಮಗುವಿನ ಸಂಬಂಧ ಇದ್ದಂತೆ. ಆದರೆ ಟಿಪ್ಪು ಕನ್ನಡ ವಿರೋಧಿ, ಮೇಲುಕೋಟೆಯಲ್ಲಿ ನರಮೇಧ ಮಾಡಿದ, ಶ್ರೀರಂಗಪಟ್ಟಣದಲ್ಲಿ ದೇಗುಲವನ್ನು ಮಸೀದಿಯಾಗಿ ಪರಿರ್ತಿಸಿದ ಎಂದರೆ ಉರಿದು ಬೀಳುವ ಸಿದ್ದರಾಮಯ್ಯನವರೆ ನಿಮಗೂ ಟಿಪ್ಪುವಿಗು ಏನು ಸಂಬಂಧ ಎಂದು ಪ್ರಶ್ನಿಸಿದರು.
ಕಠಿಣ ಕ್ರಮ ಕೈಗೊಳ್ಳಲಾಗುವುದು: ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದ್ದು ಅಲ್ಲಿನ ಪಂಡಿತರು ವಾಪಾಸ್ ಬೇರೆಡೆ ತೆರಳುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿ ಯಿಸಿ, ಕಾಶ್ಮಿರದ ಮೂಲ ನಿವಾಸಿಗಳನ್ನು ಹೊರದಬ್ಬು ವುದೇ ಅಸಹಿಷ್ಣುತೆ ವಾದಿಗಳ ಅಜೆಂಡ. ನಮ್ಮವರ ಒಂದು ಹನಿ ರಕ್ತ ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ. ಕಾಶ್ಮೀರದಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ದಲಿತರನ್ನು ಎತ್ತಿಕಟ್ಟುವ ಕೆಲಸ ಹೆಚ್ಚುತ್ತಿದೆ: ಆರೋಪ
ದೇಶದ ವಿರುದ್ಧ ಇಲ್ಲಿರುವ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸಮಕಾಲೀನರಾದ ದಲಿತ ಮುಖಂಡರಾದ ಜೋಗೇಂದ್ರ ನಾಥ ಮಂಡಲ್ ಅವರು ದೇಶ ವಿಭಜನೆ ವೇಳೆ ಮಹಮ್ಮದ್ ಅಲಿ ಜಿನ್ನಾ ಮಾತು ನಂಬಿ ಪಾಕಿಸ್ಥಾನಕ್ಕೆ ಹೋಗುತ್ತಾರೆ. ಆ ಬಳಿಕ ಅಲ್ಲಿನ ಅಸಹಿಷ್ಣುತೆ, ಹಿಂಸೆ ತಾಳಲಾರದೆ 5 ವರ್ಷಗಳಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ವಾಪಾಸ್ ಬರುತ್ತಾರೆ. ಇದನ್ನು ಎಲ್ಲರೂ ತಿಳಿಯಬೇಕು ಎಂದು ಸಿ.ಟಿ.ರವಿ ತಿಳಿಸಿದರು.