ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒಂದು ತರಹ ವಲಸೆ ರಾಜಕಾರಣಿ. ಕ್ಷೇತ್ರವನ್ನು ಮನೆಯ ಆಸ್ತಿ ರೀತಿ ಹಂಚಿಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ವರ್ಧಿಸುವುದಿಲ್ಲ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, ಸಮಾಜದ ಧ್ಯೇಯೋದ್ಧೇಶವನ್ನು ಮರೆತು ಕೇವಲ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಕುಟುಂಬ ಆಧಾರಿತ ರಾಜಕೀಯಕ್ಕೆ ಆದ್ಯತೆಯನ್ನು ಸಿದ್ದರಾಮುಯ್ಯ ಕೊಟ್ಟಿದ್ದಾರೆಂದು ಟೀಕಿಸಿದರು.
ಸಿದ್ದರಾಮಯ್ಯ ಸಮಾಜಕ್ಕೆ ಮಾದರಿಯಾಗಬೇಕಾದವರು. ಆದರೆ ಅವರು ಈಗ ಸ್ವಾರ್ಥದ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಇದರಿಂದ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಅವರ ಪ್ರಯಾಣ ಎಲ್ಲಿಗೆ ಹೋಗಿ ತಲುಪುತ್ತದೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನಾನು ಸಹ ಆಸಕ್ತಿಯಿಂದ ನೋಡುತ್ತಿದ್ದೇನೆ. ಆದರೆ ಕೋಲಾರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.