ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೇಫ್ ಕ್ಷೇತ್ರ ಪರಿಶೀಲನೆ ಕಾರ್ಯ ಮತ್ತೆ ಮುಂದುವರಿದಿದ್ದು, ತಮ್ಮ ಹಳೆ ಕ್ಷೇತ್ರ ವರುಣಾದತ್ತ ಚಿತ್ತ ಹರಿಸಿದ್ದಾರೆ.
ಕಳೆದ ಬಾರಿ ಈ ಕ್ಷೇತ್ರವನ್ನು ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿ ಬಾದಾಮಿಯಲ್ಲಿ ಮಾತ್ರ ಜಯಗಳಿಸಿದ್ದರು.
ಆದರೆ ಈ ಬಾರಿ ಬಾದಾಮಿಯೂ ಅವರಿಗೆ ಸುರಕ್ಷಿತ ತಾಣ ಎಂದೆನಿಸುತ್ತಿಲ್ಲ. ಜತೆಗೆ ರಾಜಧಾನಿಯಿಂದ ಕ್ಷೇತ್ರಕ್ಕೆ ಓಡಾಡುವುದು ಕೂಡಾ ಅವರಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಬಾದಾಮಿ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಸುರಕ್ಷಿತ ಕ್ಷೇತ್ರದ ತಲಾಶ್ ನಲ್ಲಿ ಸುಮಾರು ಒಂದೂವರೆ ವರ್ಷ ಸವೆಸಿದ್ದಾರೆ.
ಇದನ್ನೂ ಓದಿ:ಗೆಹ್ಲೋಟ್- ಪೈಲಟ್ ಜಗಳದಿಂದ ಖರ್ಗೆಗೆ ಲಾಭ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ?
ಮತ್ತೊಮ್ಮೆ ಮುಖ್ಯಮಂತ್ರಿ ಆಗಬಯಸುತ್ತಿರುವ ಸಿದ್ದರಾಮಯ್ಯ ಅವರಿಗೆ ಸ್ವಂತದಾದ್ದ ಕ್ಷೇತ್ರವೇ ಇಲ್ಲ ಎಂಬ ಟೀಕೆ ಪಕ್ಷ ಹಾಗೂ ಅನ್ಯಪಕ್ಷಗಳಿಂದಲೂ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಅಂತಿಮ ಎಂದೇ ಹೇಳಲಾಗುತ್ತಿತ್ತು. ಆದರೆ ಮಾಜಿ ಸಂಸದ ವಿ.ಮುನಿಯಪ್ಪ ಅವರ ಮುನಿಸು ಸಿದ್ದರಾಮಯ್ಯ ಸ್ಪರ್ಧೆಗೆ ಅಡ್ಡಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಿದರೂ ಮುನಿಯಪ್ಪ ಜೆಡಿಎಸ್ ಹಾಗೂ ಬಿಜೆಪಿಯ ಒಮ್ಮತದ ಅಭ್ಯರ್ಥಿಯಾಗಬಹುದೆಂಬ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಅವರು ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ.
ಹೀಗಾಗಿ ತಮ್ಮ ಹಳೆಯ ಕ್ಷೇತ್ರ ವರುಣಾದತ್ತ ಮತ್ತೆ ದೃಷ್ಟಿ ಹರಿಸಿದ್ದು ಮಗನಿಗೆ ತಾತ್ಕಾಲಿಕ ಬ್ರೇಕ್ ನೀಡಬಹುದು ಎಂದು ಹೇಳಲಾಗುತ್ತಿದೆ.