Advertisement

ಸಿದ್ದರಾಮಯ್ಯ- ಮಾಧುಸ್ವಾಮಿ ಜಟಾಪಟಿ

11:35 PM Feb 19, 2020 | Lakshmi GovindaRaj |

ವಿಧಾನಸಭೆ: ಮಂಗಳೂರು ಗಲಭೆ ಕುರಿತ ಚರ್ಚೆಯ ವೇಳೆ ಹರೀಶ್‌ ಪೂಂಜಾ, ಸುನೀಲ್‌ ಕುಮಾರ್‌ ಇತರರು ಗಲಭೆಕೋರರ ದಾಂಧಲೆಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾರಂಭಿಸಿದರು. ಆಗ ಸಿದ್ದರಾಮಯ್ಯ, ಈ ಫೋಟೋ ಗಳನ್ನೆಲ್ಲಾ ನ್ಯಾಯಾಲಯಕ್ಕೆ ಕೊಟ್ಟಿದ್ದಾರೆ. ಅದನ್ನು ಆಧರಿಸಿಯೇ ಆದೇಶ ನೀಡಿದೆ ಎಂದರು. ಇದಕ್ಕೆ ಕೋಪಗೊಂಡ ಜೆ.ಸಿ.ಮಾಧುಸ್ವಾಮಿ, ಹೀಗೆಲ್ಲಾ ಮಾತನಾಡಬೇಡಿ, ಕುಳಿತುಕೊಳ್ಳಿ ಎಂದರು.

Advertisement

ಇದಕ್ಕೆ ಕೋಪಗೊಂಡ ಸಿದ್ದರಾಮಯ್ಯ, ನೀವ್ಯಾರು ನನಗೆ ಸೂಚನೆ ನೀಡಲು ಎಂದು ಏರುದನಿಯಲ್ಲಿ ಪ್ರಶ್ನಿಸಿದರು. ಇನ್ನಷ್ಟು ಆಕ್ರೋಶಗೊಂಡ ಜೆ.ಸಿ.ಮಾಧುಸ್ವಾಮಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಸದನದಲ್ಲಿ ಚರ್ಚಿಸುವಂತಿಲ್ಲ. ಇದು ನಾವೇ ಸದನದಲ್ಲಿ ಹಾಕಿಕೊಂಡಿರುವ ನಿರ್ಬಂಧ. ಹಾಗಿದ್ದರೂ ಸಿದ್ದರಾಮಯ್ಯ ಅವರು ಅಂತಹ ವಿಚಾರಗಳನ್ನು ಪ್ರಸ್ತಾಪಿಸಿ ನ್ಯಾಯಾಂಗ ನಿಂದನೆಗೆ ಎಡೆ ಮಾಡಿಕೊಡುವಂತಾಗಿದ್ದು, ಸದನದ ನಿಂದನೆಗೆ ಕಾರಣವಾಗುತ್ತಿರುವಂತಿದೆ. ಈ ಸಂಬಂಧ ನೋಟಿಸ್‌ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ವಿತಂಡವಾಡ. ನಾನು ನ್ಯಾಯಾಂಗ ನಿಂದನೆಯಾಗುವ ರೀತಿಯಲ್ಲಿ ಮಾತನಾಡುತ್ತಿಲ್ಲ. ನ್ಯಾಯಾಲಯ ಗಮನಿಸಿರುವ ಅಂಶಗಳನ್ನಷ್ಟೇ ಉಲ್ಲೇಖೀಸಿದ್ದೇನೆ. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಸತ್ತವರ ಮೇಲೂ ಕೇಸ್‌ ಹಾಕಲಾಗಿದೆ ಎಂದು ಹೇಳಿದರು. ಆಗ ಪ್ರಿಯಾಂಕ್‌ ಖರ್ಗೆ, ಯಾರಿಗೆ ಹೆದರಿಸುತ್ತೀರಿ. ನೋಟಿಸ್‌ ಕೊಡಿ ನೋಡೋಣ ಎಂದು ಸವಾಲು ಹಾಕಿದರು. ಇದರಿಂದ ಮತ್ತೆ ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ ಸ್ಪೀಕರ್‌ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನವನ್ನು ಐದು ನಿಮಿಷ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next