ವಿಧಾನಸಭೆ ಚುನಾವಣೆಯತ್ತ ರಾಜ್ಯ ದಾಪುಗಾಲಿಡುತ್ತಿರುವಾಗಲೇ ರಾಜಕೀಯ ಪ್ರಹಸನಗಳು, ಆರೋಪ-ಪ್ರತ್ಯಾರೋಪಗಳು, ಪರೋಕ್ಷ ಎಚ್ಚರಿಕೆಗಳು, ಅಸಮಾಧಾನ, ಬೇಗುದಿ ಒಂದೊಂದಾಗಿ ಉಕ್ಕಿ ಹರಿಯಲಾರಂಭಿಸಿವೆ. ಶನಿವಾರ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಡಿರುವ ಮಾತುಗಳು ಸದ್ಯದಲ್ಲೇ ರಾಜ್ಯದಲ್ಲಿ ಚುನಾವಣೆಯ ಕಾವು ಏರುವ ಮುನ್ಸೂಚನೆಯನ್ನು ನೀಡಿವೆ.
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ತುಮಕೂರಿನಲ್ಲಿ ಶನಿವಾರ ನಡೆದ ಕುರುಬ ಜನಜಾಗೃತಿ ಸಮಾವೇಶದಲ್ಲಿ “ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು’ ಎಂದು ನಾಯಕರು ಪ್ರತಿಪಾದಿಸಿದರು.
ಶಾಸಕ ಬೈರತಿ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ರಾಜ್ಯದ ಎಲ್ಲ ಜಾತಿಗಳ ನಾಯಕರು. ಅವರಿಗೆ ಸಿಎಂ ಆಗುವ ಆಸೆ ಇಲ್ಲ, ಆದರೆ ಅದು ಜನರಿಗೆ ಅಗತ್ಯ. ಮುಂದೆ ತುಮಕೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಅಹಿಂದ ಸಮಾವೇಶ ನಡೆಸಲಾಗುತ್ತದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡು ವುದು ನಮ್ಮ ಗುರಿ ಎಂದು ಹೇಳಿದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಧ್ವನಿಗೂಡಿಸಿ, ಹಿಂದುಳಿದವರ, ಬಡವರ, ಶೋಷಿತರ ಧ್ವನಿಯಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯ ಮಂತ್ರಿಯಾಗಬೇಕು ಎಂದು ಆಶಿಸಿದರು. ಅಶಕ್ತರು ಸ್ವಾಭಿಮಾನದ ಜೀವನ ಕಟ್ಟಿ ಕೊಳ್ಳಲು ಅಡಿಪಾಯ ಹಾಕಿದವರೇ ಸಿದ್ದರಾಮಯ್ಯ. ಅಹಿಂದ ವರ್ಗದ ಪ್ರತಿಯೊಬ್ಬರೂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಬೇಕು ಎಂದರು.
Related Articles
ಸಂದೇಶ ರವಾನೆ
ನಾನು ಹಿಂದುಳಿದವರಿಗೆ, ದಲಿತರಿಗೆ, ಅಲ್ಪಸಂಖ್ಯಾಕರಿಗೆ ನ್ಯಾಯ ಕೊಡಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ, ಮುಂದೆಯೂ ಬೀಳುವುದಿಲ್ಲ. ನನಗೆ ಅಧಿಕಾರ ಇರಲಿ, ಬಿಡಲಿ; ಶೋಷಿತರ ಧ್ವನಿಯಾಗಿಯೇ ಕೆಲಸ ಮಾಡಿದ್ದೇನೆ. ಅಧಿಕಾರಕ್ಕಾಗಿ ಬೇರೆ ಪಕ್ಷದ ಬಾಲ ಹಿಡಿದು ಹೋದವನಲ್ಲ. ಸಾಮಾಜಿಕ ಬದ್ಧತೆಗಾಗಿ ಇರುವವನು’ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷ ಸಂದೇಶ ರವಾನಿಸಿದರು.
ಬಿಜೆಪಿ ಸರಕಾರಕ್ಕೆ ಸಾಮಾಜಿಕ ನ್ಯಾಯದ ಪರ ಬದ್ಧತೆ ಇಲ್ಲ. ಶೋಷಿತರ ಪರವಾಗಿ ಎಂದೆಂದಿಗೂ ಇರುವುದು ಕಾಂಗ್ರೆಸ್ ಮಾತ್ರ. ಮುಂದಿನ ಚುನಾವಣೆಯಲ್ಲಿ ಯಾರ ಮಾತನ್ನೂ ಕೇಳದೆ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ ಎಂದೂ ಸಿದ್ದರಾಮಯ್ಯ ಕುರುಬ ಜನಾಂಗಕ್ಕೆ ಕರೆ ನೀಡಿದರು.
ಪರಂ ಗೈರು
ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಮಡಿವಾಳರ ಸಮಾವೇಶ ಮತ್ತು ಅಲ್ಪಸಂಖ್ಯಾಕರ ಕಾರ್ಯ ಕ್ರಮಕ್ಕೆ ಗೈರು ಹಾಜರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಅವರು ಶನಿವಾರ ಸಿದ್ದರಾಮಯ್ಯ ಭಾಗವಹಿಸಿದ್ದ ಕುರುಬ ಜಾಗೃತಿ ಸಮಾವೇಶಕ್ಕೂ ಗೈರಾಗಿದ್ದರು. ಇದು ಕಾಂಗ್ರೆಸ್‌ನಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಕಾಂಗ್ರೆಸ್ ಮತ್ತು ನಾಯಕರಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈಶ್ವರಪ್ಪನವರು ಸುಮ್ ಸುಮ್ನೆ “ಕುರುಬರನ್ನು ಎಸ್‌ಟಿ ಮಾಡಿದ್ದೆ’ ಅಂತಾರೆ.ನಾನೇ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೆ ಮಾನ್ಯ ಈಶ್ವರಪ್ಪ ಅವರೇ. ಈಗ ನಿಮ್ಮ ಕೇಂದ್ರ ಸರಕಾರ ಇದೆ, ರಾಜ್ಯ ಸರಕಾರವೂ ನಿಮ್ಮದೇೆ. ನಿಮಗೆ ಕುರುಬರ ಬಗ್ಗೆ ಕಾಳಜಿ ಇದ್ದರೆ ಮಾಡಿಸಿ ನೋಡೋಣ.
– ಸಿದ್ದರಾಮಯ್ಯ, ಮಾಜಿ ಸಿಎಂ