ಬೆಂಗಳೂರು: ತುಮಕೂರು ಪ್ರಕರಣದಲ್ಲಿ ತಮ್ಮ ರಾಜೀನಾಮೆ ಕೇಳಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿಯವರಿಗೆ ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಮಾನ್ಯ ಸಿದ್ದರಾಮಯ್ಯ ಅವರೇ, ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಮ್ಮ ಕೀಳುಮಟ್ಟದ ರಾಜಕಾರಣ ರಾಜ್ಯದ ಜನತೆಗೆ ಹೊಸತೇನಲ್ಲ. 2015ರಲ್ಲಿ ರಾಜ್ಯದಲ್ಲಿ 5,109 ನವಜಾತ ಶಿಶುಗಳು, 519 ಬಾಣಂತಿಯರು ಸಾವನ್ನಪ್ಪಿದ್ದಾರೆಂದು ಅಂಕಿ-ಅಂಶ ಹೇಳುತ್ತದೆ. ಆಗ ನೀವು ನಿಮ್ಮ ಆರೋಗ್ಯ ಸಚಿವರ ರಾಜೀನಾಮೆ ಪಡೆದುಕೊಂಡಿರಾ ಎಂದು ಪ್ರಶ್ನಿಸಿದ್ದಾರೆ.
ತಾವು ಮುಖ್ಯಮಂತ್ರಿಗಳಾಗಿದ್ದಾಗ ತಮ್ಮ ತವರು ಜಿಲ್ಲೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 6 ಬಾಣಂತಿಯರು ಜೀವ ಕಳೆದುಕೊಂಡಾಗ ಅಥವಾ ಕೋಲಾರದಲ್ಲಿ 90 ಹಸುಗೂಸುಗಳ ಮರಣದ ಪ್ರಕರಣ ಬೆಳಕಿಗೆ ಬಂದಾಗ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಿರಾ? 2017ರಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಒಣ ಪ್ರತಿಷ್ಠೆಗೋಸ್ಕರ ವೈದ್ಯರನ್ನು 2 ವಾರ ಮುಷ್ಕರಕ್ಕೆ ದೂಡಿ ರಾಜ್ಯಾದ್ಯಂತ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮುಚ್ಚಿ 65ಕ್ಕೂ ಹೆಚ್ಚು ಜನ ಚಿಕಿತ್ಸೆ ಸಿಗದೆ ಸತ್ತಾಗ ಆತ್ಮಸಾಕ್ಷಿ ಇಲ್ಲದೆ ಅವರ ಸಾವಿಗೆ ಸಾಕ್ಷಿ ಕೇಳಿದ ತಾವು ಯಾವ ನೈತಿಕತೆ ಇಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದೀರಿ ಎಂದಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯವರ ಸರಕಾರ ಇದ್ದಾಗ ಸುಳುವಾಡಿ ಗ್ರಾಮದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿ 15 ಮಂದಿ ಮೃತಪಟ್ಟಾಗ ಅವರ ಆರೋಗ್ಯ ಸಚಿವರಿಗೆ 2 ದಿನವಾದರೂ ಮಾಹಿತಿಯೇ ಇರಲಿಲ್ಲ. ಮೇ 2019ರಲ್ಲಿ ಕೆಜಿಎಫ್ ನಲ್ಲಿ ಸಮೀನಾ ಎಂಬ ಗರ್ಭಿಣಿ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕಳೆದುಕೊಂಡಾಗ ರಾಜೀನಾಮೆ ಕೊಟ್ಟದ್ದಿರೇ ಎಂದು ಕೇಳಿದ್ದಾರೆ.
ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ. ಸಮಸ್ಯೆಗಳನ್ನು ಮೆಟ್ಟಿನಿಂತು ಜನರ ಕಣ್ಣೀರೊರೆಸುವುದು ನಿಜವಾದ ನಾಯಕತ್ವ. ಈ ನಿಟ್ಟಿನಲ್ಲಿ ಮುಂದೆಂದೂ ಈ ರೀತಿಯ ಘಟನೆಗಳು ಮರುಕಳಿಸದಂತೆ ನಮ್ಮ ಸರಕಾರ ಕಾನೂನಿಗೆ ಸೂಕ್ತ ತಿದ್ದುಪಡಿ ಸಹ ತರಲಿದೆ ಎಂದು ಹೇಳಿದ್ದಾರೆ.