ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿದು ಮೈಸೂರು ಜಿಲ್ಲೆಯ ವರುಣಾದಿಂದಲೇ ಸ್ಪರ್ಧಿಸುವುದು ಖಚಿತವಾಗಿದೆ. ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಉಂಟಾಗಿರುವ ಗೊಂದಲಗಳಿಗೆ ಸದ್ಯದಲ್ಲೇ ತೆರೆ ಎಳೆಯಲಿರುವ ಅವರು ರವಿವಾರವೂ ಆಪ್ತರು ಹಾಗೂ ಕೋಲಾರದ ಮುಖಂಡರೊಂದಿಗೆ ಸಮಾಲೋಚಿಸಿದರು.
ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಹಲವರು ಒತ್ತಾಯಿಸಿದರೂ ಈ ವಿಷಯದಲ್ಲಿ ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತದೆ ಎಂದು ಹೇಳಿದ್ದು, ಆ ಮೂಲಕ ಬಹುತೇಕ ಕೋಲಾರದಿಂದ ಸ್ಪರ್ಧಿಸುವುದನ್ನು ಕೈಬಿಟ್ಟಂತೆ ಕಾಣುತ್ತಿದೆ.
ಈ ಮಧ್ಯೆ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಪುತ್ರ ಡಾ| ಯತೀಂದ್ರ ಅವರು, ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಪೂರಕವಾಗಿ ತಾನು ಕ್ಷೇತ್ರ ತ್ಯಾಗ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಈ ಹೇಳಿಕೆ ಕೂಡ ವರುಣಾದತ್ತ ಸಿದ್ದರಾಮಯ್ಯ ಅವರ ನಡೆಯನ್ನು ಖಚಿತಪಡಿಸಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮಾಜಿ ಸಚಿವ ಮೋಟಮ್ಮ, ಹರಿಹರ ಶಾಸಕ ರಾಮಪ್ಪ ಹಾಗೂ ಕೋಲಾರ ಮುಖಂಡರು ಕೋಲಾರದಿಂದ ಸ್ಪರ್ಧಿಸುವುದು ಒಳ್ಳೆಯದು, ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರೆನ್ನಲಾಗಿದೆ.