ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರು ಎಂದು ಅವರ ಶಿಷ್ಯರಾಗಿದ್ದ ಹಾಗೂ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಹೇಳಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಶುಕ್ರವಾರ ಆಸ್ಪತ್ರೆಗೆ ಆಗಮಿಸಿದ ತಕ್ಷಣ ಸಿದ್ದರಾಮಯ್ಯ ಅವರು, “ಏನಯ್ಯಾ, ನಾನು ಆಗ ಕರೆದಾಗ ಬರಲಿಲ್ಲ. ಈಗ ಬಂದಿದ್ದೀಯಾ’ ಎಂದು ತಮಾಷೆ ಮಾಡಿದರು. “ಈಗ ನಿಮ್ಮ ಆರೋಗ್ಯ ವಿಚಾರಿಸಿಕೊಂಡು ಹೋಗಲು ಬಂದಿದ್ದೀನಿ ಸರ್, ನಾನು ಈಗಲೂ ನಿಮ್ಮ ಶಿಷ್ಯನೇ’ ಎಂದು ಹೇಳಿದರು ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಶಿಷ್ಯ ಎಂದು ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಪಕ್ಷ ತೊರೆದು ಬಿಜೆಪಿಯಿಂದ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರೊಂದಿಗೆ ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯ ಸುಮಾರು 15 ನಿಮಿಷಗಳ ಕಾಲ ಉಭಯ ಕುಶಲೋಪರಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ನಾವು ಬೇರೆ ಪಕ್ಷಕ್ಕೆ ಹೋಗಿರಬಹುದು. ಆದರೂ ಸಿದ್ದರಾಮಯ್ಯ ಅವರು ಎಂದಿಗೂ ನಮ್ಮ ನಾಯಕರೇ. ಉಪಚುನಾವಣೆಯಲ್ಲಿ ಗೆದ್ದಾಗಲೇ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಘೋಷಿಸಿದ್ದೆ. ಈಗಲೂ ಅದನ್ನೇ ಹೇಳುತ್ತೇವೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಭೇಟಿಯಲ್ಲಿ ಅವರೊಂದಿಗೆ ಏನೇನು ಚರ್ಚಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ನಾವು ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಪಕ್ಷ ಬದಲಾಯಿಸಿದ ಮಾತ್ರಕ್ಕೆ ಮಾನವೀಯತೆ, ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಹೀಗಾಗಿ, ನಮ್ಮ ಮಾಜಿ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೇವೆಯೇ ಹೊರತು, ಯಾವುದೇ ರಾಜಕೀಯದ ಬಗ್ಗೆ ಚರ್ಚಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ವಿಚಾರಿಸಿದ ಮಠಾಧೀಶರು: ಆಸ್ಪತ್ರೆಗೆ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಬೋವಿ, ಕಾಗಿನೆಲೆ, ಉಪ್ಪಾರ, ಕುಂಚಟಿಗರ ಪೀಠದ ಸ್ವಾಮೀಜಿಗಳು ಹಾಗೂ ವಸತಿ ಸಚಿವ ವಿ.ಸೋಮಣ್ಣ ಆಗಮಿಸಿ, ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದು, ಸಾಮಾನ್ಯ ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.