Advertisement

ಸಿದ್ದರಾಮಯ್ಯ ಕೈ ಹಿಡಿಯದ ಮತದಾರರು

02:10 PM May 16, 2018 | Team Udayavani |

2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕಾರಣಕ್ಕೆ ಅವರ ಬೆನ್ನಿಗೆ ನಿಂತು ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಿದ್ದ ಜಿಲ್ಲೆಯ ಜನತೆ, ಈ ಬಾರಿ ಸ್ವತಃ ಸಿದ್ದರಾಮಯ್ಯ ಅವರನ್ನು ಸೋಲಿಸಿರುವುದಲ್ಲದೆ, ಅವರ ಆಪ್ತ ಬಳಗದ ಶಾಸಕರಿಗೆಲ್ಲ ಸೋಲಿನ ರುಚಿ ತೋರಿಸಿದ್ದಾರೆ.

Advertisement

ಮೈಸೂರು: ಚಾಮುಂಡೇಶ್ವರಿಯಲ್ಲಿ ತಮ್ಮ ಒಡ್ಡೋಲಗದ ಮಾತುಗಳನ್ನು ಕೇಳಿ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಸಿದ್ದರಾಮಯ್ಯ ಹತ್ತು ದಿನಗಳ ಕಾಲ ಕ್ಷೇತ್ರದ ಹಳ್ಳಿಹಳ್ಳಿ ಸುತ್ತಿ ಮತಯಾಚನೆ ಮಾಡಿದರೂ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ 36042 ಮತಗಳ ಭಾರೀ ಅಂತರದ ಸೋಲು ಕಂಡಿದ್ದರೆ, ತಮ್ಮ ಆಪ್ತ ಬಳಗದ ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಎಂ.ಕೆ.ಸೋಮಶೇಖರ್‌, ಎಚ್‌.ಪಿ.ಮಂಜುನಾಥ್‌ರನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫ‌ಲರಾಗಿದ್ದಾರೆ.

ಸಂಪುಟ ಪುನಾರಚನೆ ಹೆಸರಲ್ಲಿ ಮಂತ್ರಿಮಂಡಲದಿಂದ ತಮ್ಮನ್ನು ಕೈಬಿಟ್ಟಿದ್ದರಿಂದ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ನಂಜನಗೂಡು ಕ್ಷೇತ್ರದಲ್ಲಿ 2017ರಲ್ಲಿ ಉಪ ಚುನಾವಣೆ ಎದುರಿಸಿದ್ದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್‌, ಸರ್ಕಾರದ ವಿರುದ್ಧ ಈಜಲಾಗದೆ 20 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಪ್ರಸಾದ್‌, ಈ ಚುನಾವಣೆಯಲ್ಲಿ ತಮ್ಮ ಅಳಿಯ ಬಿ.ಹರ್ಷವರ್ಧನ್‌ರಿಗೆ ಬಿಜೆಪಿ ಟಿಕೆಟ್‌ ಕೊಡಿಸಿ ಗೆಲ್ಲಿಸಿಕೊಂಡು, ಉಪ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಕಳಲೆ ಎನ್‌.ಕೇಶವಮೂರ್ತಿ ಅವರನ್ನು ಸೋಲಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ದಯಾನಂದ ಮೂರ್ತಿ 13679 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ವಿಶ್ವನಾಥ್‌ ಅಸ್ತಿತ್ವ ಸಾಬೀತು: ಜೆಡಿಎಸ್‌ನಿಂದ ಹೊರಹಾಕಿಸಿಕೊಂಡು ರಾಜಕೀಯವಾಗಿ ಸಂಕಷ್ಟದ ಸಂದರ್ಭದಲ್ಲಿದ್ದಾಗ ತಮ್ಮ ಸಮುದಾಯದ ನಾಯಕ ಮುಖ್ಯಮಂತ್ರಿಯಾಗಲಿ ಎಂಬ ಮಹದಾಸೆಯಿಂದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‌.ವಿಶ್ವನಾಥ್‌, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ತಮ್ಮನ್ನು ಕಡೆಗಣಿಸಿದ್ದರಿಂದ ಬೇಸತ್ತು 40 ವರ್ಷಗಳ ಕಾಂಗ್ರೆಸ್‌ ಒಡನಾಟವನ್ನು ತೊರೆದು ಜೆಡಿಎಸ್‌ ಸೇರಿ, ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ,

Advertisement

ಸಿದ್ದರಾಮಯ್ಯ ನೀಲಿಗಣ್ಣಿನ ಹುಡುಗ ಎನಿಸಿಕೊಂಡಿದ್ದ ಎಚ್‌.ಪಿ.ಮಂಜುನಾಥ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ರಾಜಕೀಯವಾಗಿ ವಿಶ್ವನಾಥ್‌ ತಮ್ಮ ಅಸ್ತಿತ್ವ ಸಾಬೀತು ಮಾಡಿದ್ದಲ್ಲದೆ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ ಗರಡಿಯಲ್ಲಿ ರಾಜಕೀಯವಾಗಿ ಬೆಳೆದ ಎಚ್‌.ವಿಶ್ವನಾಥ್‌, ಅರಸರ ಕರ್ಮಭೂಮಿ ಹುಣಸೂರಿನಲ್ಲೇ ಚುನಾವಣೆಗೆ ನಿಂತು ಗೆದ್ದಿದ್ದು ವಿಶೇಷ. ಬಿಜೆಪಿ ಅಭ್ಯರ್ಥಿ ಜೆ.ಎಸ್‌.ರಮೇಶ್‌ಕುಮಾರ್‌ 6406 ಮತಗಳನ್ನು ಪಡೆದಿದ್ದಾರೆ.

ಕ್ಷೇತ್ರ ನಿರ್ಲಕ್ಷ್ಯ: ತಿ.ನರಸೀಪುರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅತ್ಯಾಪ್ತ ಡಾ.ಎಚ್‌.ಸಿ.ಮಹದೇವಪ್ಪಅವರನ್ನು ಮೊದಲ ಪ್ರಯತ್ನದಲ್ಲೇ ಭಾರೀ ಅಂತರದಿಂದ ಸೋಲಿಸುವಲ್ಲಿ ಜೆಡಿಎಸ್‌ನ ಅಶ್ವಿ‌ನ್‌ ಕುಮಾರ್‌ ಸಫ‌ಲರಾಗಿದ್ದಾರೆ. ಗೆದ್ದ ನಂತರ ಕ್ಷೇತ್ರಕ್ಕೆ ಮುಂದಿನ ಚುನಾವಣೆವರೆಗೆ ಕಾಲಿಡದಿರುವುದು, ಕಪಿಲಾ ನದಿ ದಂಡೆಯಲ್ಲಿದ್ದು ಸತತ ಬರಗಾಲದಲ್ಲೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದದು ಅವರ ಸೋಲಿಗೆ ಪ್ರಮುಖ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್‌.ಶಂಕರ್‌ 11812 ಮತಗಳನ್ನು ಪಡೆದಿದ್ದಾರೆ.

ತಂದೆಯ ಅನುಕಂಪ: ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೀಡಾದ ಶಾಸಕ ಎಸ್‌.ಚಿಕ್ಕಮಾದು ಪುತ್ರ ಅನಿಲ್‌ ಚಿಕ್ಕಮಾದು, ತಂದೆಯ ಸಾವಿನ ಅನುಕಂಪ ಹಾಗೂ ಸಂಸದ ಆರ್‌.ಧ್ರುವನಾರಾಯಣರ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸಿ ಸಿಗದಿದ್ದಾಗ ಜೆಡಿಎಸ್‌ ಸೇರಿ ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿ, ವಯೋ ಸಹಜ ಕಾರಣಗಳಿಂದ ಇದೇ ನನ್ನ ಕಡೇ ಚುನಾವಣೆ ಎಂದು ಪ್ರಚಾರ ಮಾಡಿದ್ದರೂ ಕ್ಷೇತ್ರದ ಮತದಾರ ಬೀಚನಹಳ್ಳಿ ಚಿಕ್ಕಣ್ಣರ ಕೈ ಹಿಡಿದಿಲ್ಲ. ಬಿಜೆಪಿ ಅಭ್ಯರ್ಥಿ ಸಿದ್ದರಾಜು 34425 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಫ‌ಲಿಸದ ಅನುದಾನ: ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವೆಂಕಟೇಶ್‌ ವಿರುದ್ಧ ಜೆಡಿಎಸ್‌ನ ಕೆ.ಮಹದೇವ್‌ ಗೆಲುವು ಸಾಧಿಸಿ, ಎರಡು ಬಾರಿಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ ಕೇವಲ 400 ಮತಗಳ ಅಂತರದಿಂದ ವೆಂಕಟೇಶ್‌ ವಿರುದ್ಧ ಸೋತಿದ್ದ ಮಹದೇವ್‌, 2013ರ ಚುನಾವಣೆಯಲ್ಲಿ ಮತ್ತೆ ಎದುರಾಳಿ.

ಆದರೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ನಿಧನರಾದ್ದರಿಂದ ತಿಂಗಳ ನಂತರ ನಡೆದ ಚುನಾವಣೆಯಲ್ಲಿ 2ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಐದು ಬಾರಿ ಶಾಸಕರಾಗಿ ಜೆ.ಎಚ್‌.ಪಟೇಲ್‌ ಮಂತ್ರಿಮಂಡಲದಲ್ಲಿ ಸಚಿವರೂ ಆಗಿದ್ದ ಕೆ.ವೆಂಕಟೇಶ್‌, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಬಿಡಿಎ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿದ್ದಲ್ಲದೆ, ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನೂ ಸಿದ್ದರಾಮಯ್ಯ ನೀಡಿದ್ದರು.

ಸಾ.ರಾ.ಗೆ ಹ್ಯಾಟ್ರಿಕ್‌ ಗೆಲುವು: ಕೆ.ಆರ್‌.ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಾ.ರಾ.ಮಹೇಶ್‌, ಕಾಂಗ್ರೆಸ್‌ ಅಭ್ಯರ್ಥಿ ಡಿ.ರವಿಶಂಕರ್‌ ಅವರ ತೀವ್ರ ಪೈಪೋಟಿಯ ನಡವೆಯೂ ಹ್ಯಾಟ್ರಿಕ್‌ ಗೆಲುವು ಸಾಧಿಸುವಲ್ಲಿ ಸಫ‌ಲರಾಗಿದ್ದಾರೆ. 2008ರಲ್ಲಿ ಎಚ್‌.ವಿಶ್ವನಾಥ್‌ ವಿರುದ್ಧ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಸಾ.ರಾ.ಮಹೇಶ್‌, 2013ರಲ್ಲಿ ದೊಡ್ಡಸ್ವಾಮೇಗೌಡರ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ದೊಡ್ಡಸ್ವಾಮೇಗೌಡರ ಪುತ್ರ, ಜಿಪಂ ಸದಸ್ಯ ಡಿ.ರವಿಶಂಕರ್‌ ತೀವ್ರ ಪೈಪೋಟಿ ನೀಡಿದ್ದು, ಅಂತಿಮವಾಗಿ 1779 ಮತಗಳ ಅಂತರದಿಂದ ಸಾ.ರಾ.ಮಹೇಶ್‌ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ವೇತಾ ಗೋಪಾಲ್‌ 2716 ಮತಗಳನ್ನು ಪಡೆದಿದ್ದಾರೆ.

ಡಾ. ಯತೀಂದ್ರಗೆ ಭರ್ಜರಿ ಗೆಲುವು: ವರುಣಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಗೊಂದಲಗಳಿಂದಾಗಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ನಿರಾಯಾಸವಾಗಿ ಭಾರೀ ಅಂತರದ ಗೆಲುವು ದಾಖಲಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರೇ ಅಭ್ಯರ್ಥಿ ಎಂದು ಬಿಂಬಿಸಿ, ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ ಬಳಿಕ ವಿಜಯೇಂದ್ರ ಬದಲಿಗೆ ತೋಟದಪ್ಪ ಬಸವರಾಜು ಅವರಿಗೆ ಟಿಕೆಟ್‌ ನೀಡಿದ್ದರಿಂದ ಅಸಮಾಧಾನಗೊಂಡ ವಿಜಯೇಂದ್ರ ಬೆಂಬಲಿಗರು ಬಿಜೆಪಿಗೆ ಕೈಕೊಟ್ಟಿದ್ದರಿಂದ ತೋಟದಪ್ಪ ಬಸವರಾಜು ಯತೀಂದ್ರ ಅವರಿಗೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಜೆಡಿಎಸ್‌ ಅಭ್ಯರ್ಥಿ ಅಭಿಷೇಕ್‌ ಮಣೆಗಾರ್‌ 28123 ಮತಗಳನ್ನು ಪಡೆದಿದ್ದಾರೆ.

ನಗರದ 2 ಕ್ಷೇತ್ರದಲ್ಲಿ ಕಮಲ, 2 ಕೈ ವಶ: ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಪಕ್ಷದೊಳಗಿನ ವಿರೋಧದ ಅಲೆಯ ನಡುವೆಯೂ ಸಚಿವ ತನ್ವೀರ್‌ ಸೇs… ಗೆಲುವಿನ ದಡ ಸೇರಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಎದುರಾಳಿಯಾಗಿದ್ದ ಸಂದೇಶ್‌ ಸ್ವಾಮಿ, ಟಿಕೆಟ್‌ ಸಿಗದ ಕಾರಣ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಎಸ್‌ಡಿಪಿಐನ ಅಬ್ದುಲ್‌ ಮಜೀದ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, ಜೆಡಿಎಸ್‌ ಅಭ್ಯರ್ಥಿ ಅಬ್ದುಲ್‌ ಅಜೀಜ್‌ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.

ಗೆಲುವಿನ ದಡ: ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾದ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ಯಾರಿಗೆ ಎಂಬುದೇ ಗೊಂದಲದ ಗೂಡಾಗಿತ್ತು. ಅಂತಿಮವಾಗಿ ಟಿಕೆಟ್‌ ತರುವಲ್ಲಿ ಸಫ‌ಲರಾದ ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಪಕ್ಷದೊಳಗಿನ ಎಲ್ಲ ಏಟುಗಳನ್ನೂ ದಾಟಿ ಗೆಲುವಿನ ದಡ ಸೇರಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕೆ.ವಿ.ಮಲ್ಲೇಶ್‌ 11607 ಮತಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬಿಜೆಪಿ ಯಶಸ್ವಿ: ಸತತ ನಾಲ್ಕು ಬಾರಿ ಬಿಜೆಪಿಯ ಎಚ್‌.ಎಸ್‌.ಶಂಕರಲಿಂಗೇಗೌಡ ಪ್ರತಿನಿಧಿಸಿದ್ದ ಚಾಮರಾಜ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಯಡಿಯೂರಪ್ಪಮಂತ್ರಿ ಮಂಡಲದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಜೆಡಿಎಸ್‌ ಸೇರಿ ಚುನಾವಣೆ ಎದುರಿಸಿದ್ದ ಶಂಕರಲಿಂಗೇಗೌಡ ಕಾಂಗ್ರೆಸ್‌ನ ವಾಸು ಎದುರು ಸೋಲುಕಂಡಿದ್ದರು.

ಈ ಬಾರಿ ವಾಸು ಅವರಿಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಒಳ ಏಟಿನಿಂದ ಸೋಲು ಕಾಣುವಂತಾಗಿದೆ. ಜತೆಗೆ ಇಲ್ಲಿ ಜೆಡಿಎಸ್‌ ಬಂಡಾಯದಿಂದಾಗಿ ಬಿಜೆಪಿ ಅಭ್ಯರ್ಥಿ ಎಲ್‌.ನಾಗೇಂದ್ರಗೆ ಅಚ್ಚರಿಯ ಗೆಲುವು ಸಿಕ್ಕಿದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರೊ.ಕೆ.ಎಸ್‌.ರಂಗಪ್ಪ27 ಸಾವಿರ ಮತಗಳೊಂದಿಗೆ ಮೂರನೇ ಸ್ಥಾನಕ್ಕಿಳಿದರೆ, ಜೆಡಿಎಸ್‌ ಟಿಕೆಟ್‌ ಸಿಗದೆ ಬಂಡಾಯವಾಗಿ ಸ್ಪರ್ಧಿಸಿದ್ದ ಕೆ.ಹರೀಶ್‌ಗೌಡ 21282 ಮತಗಳನ್ನು ಪಡೆದು ಜೆಡಿಎಸ್‌ ಅನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next