ಮೈಸೂರು: ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ. ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸೋಲನ್ನು ಒಪ್ಪಿಕೊಳ್ಳಲು ಸಿದ್ದರಾಮಯ್ಯ ಸಿದ್ಧರಿಲ್ಲ. ಸಿದ್ದು ಕಾಂಗ್ರೆಸ್ ಸಂಸ್ಕಾರ, ಸಂಸ್ಕೃತಿ ಇಲ್ಲದ ಮನುಷ್ಯ. ಅಚಾನಕ್ ಆಗಿ ನಾವು ಕರೆದುಕೊಂಡು ಬಂದಿದ್ದಕ್ಕೆ ಸಿಎಂ ಆದವರು. ಅದೃಷ್ಟದಿಂದ ಸಿಎಂ ಆದರು ಎಂದರು.
ಸಿದ್ದರಾಮಯ್ಯ ಯಾರ ಯಶಸ್ಸನ್ನೂ ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಾರ್ಥ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪ ನೋಡಿದ ಕೂಡಲೇ ಅವರಿಗೆ ಸಿಎಂ ಮಿಠಾಯಿ ನೆನಪಾಗುತ್ತದೆ. ಅದನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ ಇವರಿಗೇಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಜ್ಯಸಭೆ ವಿರೋಧದ ಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ, ಗುಲಾಂ ನಬಿ ಫೆ.15ಕ್ಕೆ ನಿವೃತ್ತಿ
ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಅವರದು ಅಹಿಂದ ಹೋರಾಟ ಅಲ್ಲ, ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಿಂದ ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವ ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್ ಟಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರನ್ನು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಅಂದುಕೊಂಡಿದ್ದರು. ಅವರಲ್ಲಿ ನಾನು ನಾನು ಎನ್ನುವ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಎನ್ನುವುದು ಈಗ ಅವರಿಗೆ ಕಾಣುತ್ತಿದೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದ್ದು, ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ಯಾವ ಹೋರಾಟ ಮಾಡುತ್ತೀರಾ? ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು. ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬಿಟ್ಟು ಅಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಮರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆಂದು ವಿಶ್ವನಾಥ್ ಕಿಡಿಕಾರಿದರು.