ಬೆಂಗಳೂರು: “ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಾಲ್ಕು ಶಾಸಕರನ್ನು ಕಳುಹಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ನಮಗೆ ಅನಿಸಿದೆ. ಹಾಗಾಗಿ ಪಕ್ಷದ ವರಿಷ್ಠರ ಸೂಚನೆಯಂತೆ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದೆಹಲಿಯಿಂದ ಶುಕ್ರವಾರ ಹಿಂತಿರುಗಿದ ಅವರು ಡಾಲರ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಬಾರದು ಎಂದು ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರು ಸೂಚನೆ ನೀಡಿದ್ದಾರೆ.
ಹಾಗಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ನಾವು ಅಧಿಕಾರಕ್ಕೆ ಹಾತೊರೆಯುತ್ತಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ. ಪ್ರತಿಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಲು ನಮಗೆ ಶಕ್ತಿ ಇದೆ. ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬಗ್ಗೆ ಊಹೆ ಮಾಡಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನಿರೀಕ್ಷಿತ. ಸಹಜವಾಗಿಯೇ ಮೈತ್ರಿ ಪಕ್ಷಗಳು ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿರುವ ಕಾರಣ ಒಂದಿಷ್ಟು ಹೆಚ್ಚು ಸ್ಥಾನ ಗೆದ್ದಿದ್ದಾರೆ. ಬಿಜೆಪಿ ಏಕಾಂಗಿಯಾಗಿ ಉತ್ತಮ ಸ್ಥಾನಗಳನ್ನು ಗೆದ್ದರೆ ಎರಡೂ ಪಕ್ಷಗಳು ಸೇರಿ ಹೆಚ್ಚು ಸ್ಥಾನ ಪಡೆದಿವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಜೂ. 5ರಂದು ರಾಜ್ಯದ ನೂತನ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಿ ಮೈತ್ರಿ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಜೆಎಸ್‌ಡಬ್ಲೂ ಸಂಸ್ಥೆಗೆ 3667 ಎಕರೆ ಭೂಮಿಯನ್ನು ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಗುತ್ತಿಗೆ ಬದಲಾಗಿ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ರಾಜ್ಯದ ನೆಲ- ಜಲ ರಕ್ಷಣೆಗಾಗಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.